ಅಪ್ಪು ಜನ್ಮದಿನ : ಮುಗಿಲು ಮುಟ್ಟಿದ ಸಂಭ್ರಮ
ಕಲಬುರಗಿ,ಮಾ.18-ಮಾರ್ಚ್ 17 ಎಂದಾಗ ಅಪ್ಪು ಅಭಿಮಾನಿಗಳ ಮನದಲ್ಲಿ ಅನೇಕ ಭಾವನೆಗಳು. ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಹ್ಯಾಪಿ ಬರ್ತ್‍ಡೇ ಎಂದು ಹೇಳಿದರೆ ಮಾರುತ್ತರ ನೀಡಲು ಅವರಿಲ್ಲ ಎಂಬ ನೋವು ಅಭಿಮಾನಿಗಳದ್ದು. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ಅಪ್ಪು ಕನ್ನಡಿಗರಿಗೆ ಸ್ಪೂರ್ತಿಯ ಚಿಲುಮೆ ಎನ್ನಬಹುದು.
ಕನ್ನಡ ಚಿತ್ರ ರಂಗದಲ್ಲಿ ಮಿಂಚಿ ಮರೆಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮವನ್ನು ರಾಜ್ಯ ಸರ್ಕಾರ ಸ್ಪೂರ್ತಿಯದಿನವನ್ನಾಗಿ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪಾಳಾ ಗ್ರಾಮದ ಯುವಕರ ಬಳಗದ ವತಿಯಿಂದ ಅಪ್ಪು ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಅನ್ನದಾನ ಮಾಡುವ ಮೂಲಕ ಆಚರಿಸಲಾಯಿತು.
ಗ್ರಾಮದ ಗುರುಮೂರ್ತಿ ಶಿವಾಚಾರ್ಯರು ಅಪ್ಪುವಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭಜನಾ ಮಂಡಳಿಯಿಂದ ಭಜನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಮುಖಂಡರು, ಹಿರಿಯರು, ಮಕ್ಕಳು ಸೇರಿದಂತೆ ಹಲವರು ಭಾಗಿಯಾಗಿದ್ದರು.