ಗಿರಿಜಾ ಕುಟುಂಬಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.18: ವಿಶ್ವ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ಸಮಯದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟ ಗ್ರಾಮ ಪಂಚಾಯಿತಿ ನೀರುಗಂಟಿ ಗಿರಿಜಾ(34) ಅವರಿಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಸರ್ಕಾರಿ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನಾಂಕ 15-09-2024 ರಂದು ಸರ್ಕಾರದ ನಿರ್ದೇಶನದಂತೆ ಜಿಲ್ಲಾಪಂಚಾಯಿತಿ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತೆಂಡೆಕೆರೆ ಗ್ರಾಮ ಪಂಚಾಯಿತಿಯ ಬಳ್ಳೇಕೆರೆ ಗ್ರಾಮದ ನೀರುಗಂಟಿ ಗಿರಿಜಾ ಸೇರಿದಂತೆ ನೂರಾರು ನೌಕರರು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬಸ್ ಮೂಲಕ ತೆಂಡೆಕೆರೆಗೆ ಬಂದು ನಂತರ ಸ್ವಗ್ರಾಮಕ್ಕೆ ಹುಣಸನಹಳ್ಳಿ ಗ್ರಾಮದ ನೀರುಗಂಟಿ ಪ್ರಭಾವತಿಯವರೊಂದಿಗೆ ಸ್ಕೂಟರ್‍ನಲ್ಲಿ ಹಿಂಭಾಗ ಕುಳಿತು ತೆರಳುತ್ತಿದ್ದ ವೇಳೆ ಅಂಚೆಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿ ತಲೆಗೆ ಏಟು ಬಿದ್ದು ಸ್ಥಳದಲ್ಲಿಯೇ ಮೃತರಾಗಿರುತ್ತಾರೆ. ಹಾಗೂ ಸ್ಕೂಟರ್ ಚಾಲನೆ ಮಾಡುತ್ತಿದ್ದ ಪ್ರಭಾವತಿಯವರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿರಿಜಾರವರ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.
ಅಪಘಾತ ಮಾಡಿದವರನ್ನು ಕಂಡುಹಿಡಿಯಿರಿ:-
ಅಪಘಾತವಾದ ಸ್ಥಳದ ಮಾರ್ಗದಲ್ಲಿ ನಾನೂ ಸಹ ಬಂದ ವೇಳೆ ಸ್ಥಳದಲ್ಲಿಯೇ ಇದ್ದ 112 ಸಿಬ್ಬಂದಿಗೆ ಸೂಚಿಸಿದೆ. ಕೆ.ಆರ್.ಪೇಟೆ ಕಡೆಯಿಂದ ಬಂದ ಬೈಕನ್ನು ಸಮೀಪದ ಬ್ಯಾಂಕ್ ಮತ್ತು ಗ್ರಾಮ ಪಂಚಾಯಿತಿ, ಮತ್ತು ಚಿನಕುರುಳಿ ಬಳಿ ಇರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಅಪಘಾತ ಮಾಡಿದವರನ್ನು ಹುಡುಕಿ ಎಂದು ಸೂಚಿಸಿದ್ದೇನೆ. ಆದರೂ ಈ ಬಗ್ಗೆ ಯಾವುದೇ ತನಿಖೆ ಮತ್ತು ಅಪಘಾತ ಮಾಡಿದವರನ್ನು ಪೆÇೀಲೀಸರು ಹುಡುಕುವ ಗೋಜಿಗೆ ಹೋಗದಿರುವ ಕ್ರಮವನ್ನು ಶಾಸಕ ಮಂಜು ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಗ್ರಾಮಾಂತರ ಠಾಣೆಯ ಪೆÇಲೀಸರಿಗೆ ಸೂಚನೆ ನೀಡಿ ಅಪರಾಧ ಮಾಡಿದವರನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಮಾನವೀಯತೆ ಮೆರೆಯಲಿ:-
ಗಿರಿಜಾ ಅವರ ಮರಣದಿಂದ ಈ ಮಕ್ಕಳ ಕುಟುಂಬಕ್ಕೆ ತಂದೆ-ತಾಯಿಗಳು, ಅಜ್ಜಿತಾತ, ಇಲ್ಲದೆ ಅನಾಥವಾಗಿದ್ದು ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಘಟನೆಯ ಬಗ್ಗೆ ಪರಾಮರ್ಶಿಸಿ ಅನಾಥ ಕುಟುಂಬದ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಮೃತ ಗಿರಿಜಾ ಅವರ ಪತಿ ಒಂದು ವರ್ಷದ ಹಿಂದೆ ಅಕಾಲಿಕವಾಗಿ ಮರಣ ಹೊಂದಿದ್ದರು. ಅಲ್ಲದೆ ಅಜ್ಜಿ ಭಾಗ್ಯಮ್ಮ ದೊಡ್ಡಪ್ಪ ಕೂಡ ಈ ಹಿಂದೆಯೇ ಮೃತಪಟ್ಟಿದ್ದಾರೆ. ಈಗ ಆ ಇಬ್ಬರು ಮಕ್ಕಳಿಗೆ ಸರ್ಕಾರ ಸೂಕ್ತ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಹೋಬಳಿ ಜೆಡಿಎಸ್ ಅಧ್ಯಕ್ಷರುಗಳಾದ ರವಿಕುಮಾರ್, ಡಿ.ಪಿ.ಸ್ವಾಮಿಗೌಡ ಬಸವಲಿಂಗಪ್ಪ, ಟಿಎಪಿಸಿಎಂಎಸ್ ನಿರ್ದೇಶಕರುಗಳಾದ ದಿನೇಶ್, ಮಂಜುನಾಥ್, ಬಲದೇವ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೋಹನ್, ಜೆಡಿಎಸ್ ಮುಖಂಡರಾದ ಬೇಲದಕೆರೆ ನಂಜಪ್ಪ, ಜೈನಹಳ್ಳಿ ದಿನೇಶ್ ಸೇರಿದಂತೆ ಹಲವರಿದ್ದರು