ವಾಗ್ವಾದ, ತಳ್ಳಾಟ, ಪ್ರತಿಭಟನೆ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರವರಿಗೆ ಗೋಬ್ಯಾಕ್ ಘೋಷಣೆ

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.17;ಜಿ.ಎಂ.ಸಿದ್ದೇಶ್ವರ ಗೋಬ್ಯಾಕ, ಚನ್ನಬಸವನಗೌಡ ಗೋಬ್ಯಾಕ್ ಎಂದು ಘೋಷಣೆ ಕೂಗುವ ಮೂಲಕ ಹರಪನಹಳ್ಳಿ ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಸ್ಟೋಟವಾಗಿ ಮಾತಿನ ವಾಗ್ವಾದ, ಗೊಂದಲಕ್ಕೆ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಸಾಕ್ಷಿಯಾಯಿತು.ಬೆಳಿಗ್ಗೆ 11 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಿಗದಿಯಾಗಿತ್ತು, ಕೆಲವೊಂದು ಮುಖಂಡರು, ಕಾರ್ಯಕರ್ತರು ಕಲ್ಯಾಣ ಮಂಟಪದದ ಒಳಗೆ ಮುಂಚಿತವಾಗಿ ಆಸೀನರಾಗಿದ್ದರು. 11.30ಕ್ಕೆ ಸರಿಯಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡರಾದ ಜಿ.ನಂಜನಗೌಡ, ಮಂಡಲ ಅಧ್ಯಕ್ಷ ಕೆ.ಲಕ್ಷ್ಣಣ ಸೇರಿದಂತೆ ಇನ್ನೂ ಕೆಲವೊಂದು ಮುಖಂಡರು ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಸಮಾರಂಭ ನಡೆಯುವ ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಬೈಕ್ ರ‍್ಯಾಲಿ ಆಗಮಿಸುವ ಮುನ್ನಾ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಬೆಂಬಲಿಗರು ಎನ್ನಲಾದ ಆರ್.ಲೋಕೇಶ, ಶಿಂಗ್ರಿಹಳ್ಳಿ ನಾಗರಾಜ ಸೇರಿದಂತೆ ಅನೇಕರು ಪದಗ್ರಹಣ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಕಲ್ಯಾಣ ಮಂಟಪದ ಮುಖ್ಯದ್ವಾರವನ್ನು ಬಂದ್ ಮಾಡಿ ಸಿದ್ದೇಶ್ವರ ಗೋಬ್ಯಾಕ ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ವೇಳೆ ಕರುಣಾಕರರೆಡ್ಡಿ ಬಣದವರಿಗೂ ಹಾಗೂ ಸಿದ್ದೇಶ್ವರ ಪರವಾಗಿರುವ ಮುಖಂಡ ಜಿ.ನಂಜನಗೌಡ, ಚನ್ನಬಸವ£ಗೌಡ ಹಾಗೂ ಇತರರು ಕಲ್ಯಾಣ ಮಂಟಪದ ಒಳಗೆ ಹೋಗಲು ಪ್ರಯತ್ನಿಸಿದಾಗ ಆಗಲಿಲ್ಲ. ತಳ್ಳಾಟ, ವಾಗ್ವಾದ ನಡೆಯಿತು. ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಪತ್ನಿ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಗಾಯಿತ್ರಿ , ಹರಿಹರ ಶಾಸಕ ಬಿ.ಪಿ.ಹರೀಶ, ಹಡಗಲಿ ಶಾಸಕ ಕೃಷ್ಣನಾಯ್ಕ ಮುಂತಾದ ಮುಖಂಡರು ಆಗಮಿಸಿದರು. ಆಗಲೂ ಸಹ ಯಾರಿಗೂ ಒಳಗೆ ಬಿಡದೆ ಅಡ್ಡ ನಿಂತು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಸಂಸದ ಸಿದ್ದೇಶ್ವರ ಅವರು ಕರುಣಾಕರರೆಡ್ಡಿಯವರಿಗೆ ದೂರವಾಣಿ ಕರೆ ಮಾಡಿದಾಗಲೂ ಸ್ವೀಚ್ ಆಪ್ ಆಗಿತ್ತು, ಇಂದು ಬೆಳಿಗ್ಗೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ, ಶೀಘ್ರ ಬೇಟಿ ಮಾಡಿ ಕರುಣಾಕರರೆಡ್ಡಿಯವರನ್ನು ಇನ್ನೊಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತೇನೆ, ಎಂದು ಮನವೊಲಿಸಲು ಪ್ರಯತ್ನಿಸಿದರು ರೆಡ್ಡಿ ಬಣದವರು ಒಳಗೆ ಬಿಡಲಿಲ್ಲ. ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಅಭ್ಯರ್ಥಿ ಗಾಯಿತ್ರಿ, ಬಿಜೆಪಿ ಶಾಸಕರುಗಳು, ಮುಖಂಡರು ಹಿಂಬಾಗಿಲ ಮೂಲಕ ಕಲ್ಯಾಣ ಮಂಟಪ ಪ್ರವೇಶಿಸಿ ವೇದಿಕೆಯತ್ತ ನಡೆದರು.