ಮುಸ್ಲಿಂ ಸಮಾಜದ ಸಭೆ ಹುಡಾ ಅಧ್ಯಕ್ಷ ಸ್ಥಾನ ಕೊಟ್ಟು ಕಿತ್ತುಕೊಂಡಿದ್ದಕ್ಕೆ ಶಾಸಕರನ್ನು ಪ್ರಶ್ನಿಸಲು ನಿರ್ಧಾರ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.18 : ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಸ್ಥಾನವನ್ನು ಕೊಟ್ಟು, ಕಿತ್ತುಕೊಂಡ ಪ್ರಸಂಗದಿಂದ ಬೇಸತ್ತ ಮುಸ್ಲಿಂ ಸಮುದಾಯದವರು ಭಾನುವಾರ ಇಲ್ಲಿನ ಅಂಜುಮನ್‌ ಸಮಿತಿಯ ಸಭಾಂಗಣದಲ್ಲಿ ಸಭೆ ಸೇರಿ ಶಾಸಕರನ್ನು ಪ್ರಶ್ನಿಸಲು ನಿರ್ಧರಿಸಿದರು ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ಅವರಿಗೇ ಆ ಸ್ಥಾನ ನೀಡಬೇಕು ಎಂಬ ಒಕ್ಕೊರಲ ಒತ್ತಾಯಕ್ಕೆ ನಿರ್ಧರಿಸಲಾಯಿತು.
ಸಭೆಯಲ್ಲಿ ಅಂಜುಮನ್ ಸಮಿತಿಯ 10 ಮಂದಿ ಚುನಾಯಿತ ಸದಸ್ಯರು, ಎಲ್ಲ ಮಸೀದಿಗಳ ಧರ್ಮಗುರುಗಳು ಹಾಗೂ ಹಲವು ಮುಖಂಡರು ಪಾಲ್ಗೊಂಡಿದ್ದರು. ಶಾಸಕರು ರಾಜೀನಾಮೆ ಬೆದರಿಕೆ ಒಡ್ಡಿದ್ದರಿಂದ ಸರ್ಕಾರ ತನ್ನ ಆದೇಶ ಹಿಂದಕ್ಕೆ ಪಡೆಯುವಂತಾಯಿತು, ಮುಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬರಲಿರುವ ಶಾಸಕರನ್ನು ನಾವು ಪ್ರಶ್ನಿಸುತ್ತೇವೆ ಎಂದು ಬಹುತೇಕ ಎಲ್ಲರೂ ಹೇಳಿದರು ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು  ಮಾದ್ಯಮಕ್ಕೆ ತಿಳಿಸಿದರು.
‘ಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಮಾತ್ರವಲ್ಲ, ಇತರ ಹಲವು ಸಮಾಜದವರೂ ಕಣ್ಣಿಟ್ಟಿದ್ದರು. ಪಕ್ಷಕ್ಕಾಗಿ ದುಡಿದವರಿಗೆ ಈ ಸ್ಥಾನ ಕೊಟ್ಟರೆ ಖುಷಿಯೇ. ಆದರೆ ಇಲ್ಲಿ ಇಮಾಮ್ ನಿಯಾಜಿ ಅವರ ಪಕ್ಷ ನಿಷ್ಠೆ ಮತ್ತು ಕೆಲಸವನ್ನು ಗುರುತಿಸಿ ಅವರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದು ಶಾಸಕರಿಗೆ ಮೊದಲೇ ತಿಳಿದ ಸಂಗತಿಯಾಗಿತ್ತು. ಶಾಸಕರಿಗೆ ಆಕ್ಷೇಪ ಇದ್ದಿದ್ದರೆ ಮೊದಲೇ ತಿಳಿಸಿ ಆದೇಶ ಬರದಂತೆ ನೋಡಿಕೊಳ್ಳಬಹುದಿತ್ತು.  ಆದೇಶ ಹೊರಡಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ಅದನ್ನು ರದ್ದು ಮಾಡಿಸಿದ್ದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದಂತಹ ಅವಮಾನ. ಇದರಿಂದ ಬಹಳ ನೋವಾಗಿದೆ’ ಎಂದು ಸಭೆಯಲ್ಲಿದ್ದ ಹಲವು ಮುಖಂಡರು ಅಭಿಪ್ರಾಯಪಟ್ಟರು ಎಂದು ಅವರು ಹೇಳಿದರು.
‘ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಂತದಲ್ಲಿ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುವುದು ಬೇಡ. ನಮ್ಮ ಪಕ್ಷದ ನಿಷ್ಠೆ ಅಬಾಧಿತ, ಪಕ್ಷಕ್ಕಾಗಿ ನಾವು ದುಡಿದೇ ದುಡಿಯುತ್ತೇವೆ, ಶಾಸಕರ ವರ್ತನೆಗಳಷ್ಟೇ ನಮ್ಮ ವಿರೋಧ. ಯಾವುದೇ ದುಡುಕಿನ ನಿರ್ಧಾರ ಬೇಡ, ಸಮುದಾಯಕ್ಕೆ ಆಗಿರುವ ನೋವನ್ನು ನಿವಾರಿಸುವ ಪ್ರಯತ್ನವನ್ನು ವರಿಷ್ಠರು ಮಾಡುವ ವಿಶ್ವಾಸ ಇದೆ. ಹೀಗಾಗಿ ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದು ಇಮಾಮ್‌ ನಿಯಾಜಿ ಸಭೆಗೆ ತಿಳಿಸಿದರು’ ಎಂದು ಮೂಲಗಳು ಹೇಳಿವೆ.