ಹಾವಗಿ ಸ್ವಾಮಿ ಜಾತ್ರಾ ಮಹೋತ್ಸವ ಆರಂಭ
ಬೀದರ್:ಮಾ.18: ಭಾಲ್ಕಿ ತಾಲ್ಲೂಕಿನ ಶಿವಣಿ ಗ್ರಾಮದಲ್ಲಿ ಹಾವಗಿ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮಂಗಳವಾರ ಆರಂಭಗೊಂಡಿತು.
ಹಾವಗಿ ಸ್ವಾಮಿ ಗದ್ದುಗೆಗೆ ರುದ್ರಾಭಿಷೇಕದೊಂದಿಗೆ ಜಾತ್ರೆಗೆ ಚಾಲನೆ ದೊರಕಿತು. ಗದಗಿನ ಸಂಗಮೇಶ ಶಾಸ್ತ್ರಿ ಅವರು ಜಗದ್ಗುರು ರೇಣುಕಾಚಾರ್ಯರ ಜೀವನ ಕುರಿತು ಪ್ರವಚನ ನೀಡಿದರು. ಧರ್ಮಸಭೆಯಲ್ಲಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಆಶೀರ್ವಚನ ನೀಡಿದರು.
ರೇಣುಕಾಚಾರ್ಯರು ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂದು ಪ್ರತಿಪಾದಿಸಿದ್ದರು ಎಂದು ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ವೀರಶೈವ ಲಿಂಗಾಯತ ಧರ್ಮಕ್ಕೆ ರೇಣುಕಾಚಾರ್ಯರ ಕೊಡುಗೆ ಅಪಾರ. ಪಂಚ ಪೀಠಗಳ ಸ್ಥಾಪನೆ ಮೂಲಕ ಅವರು ಸಮಾಜೋಧಾರ್ಮಿಕ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಬಣ್ಣಿಸಿದರು.
ಇಡೀ ಮನುಕುಲದ ಕಲ್ಯಾಣ ಬಯಸಿದ್ದರು. ಜನರಿಗೆ ಧರ್ಮದ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡಿದ್ದರು. ಮುಕ್ತಿ ಮಾರ್ಗ ತೋರಿದ್ದರು ಎಂದು ತಿಳಿಸಿದರು.
ಹಾವಗಿ ಸ್ವಾಮಿ ಅವರು ಈ ಭಾಗದ ಸಂತರಲ್ಲಿ ಒಬ್ಬರಾಗಿದ್ದರು. ಭಕ್ತರ ಸಂಕಷ್ಟ ಪರಿಹಾರಕ್ಕೆ ಶ್ರಮಿಸಿದ್ದರು. ಅವರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ, ಮಠದ ವ್ಯವಸ್ಥಾಪಕ ಬಾಬುರಾವ್ ಸತ್ಯಪ್ಪ, ಪ್ರಮುಖರಾದ ಇಂದ್ರಜೀತ್ ಬಿರಾದಾರ, ಬಾಬುರಾವ್ ಬೇಲೂರೆ, ನಾಗಶೆಟ್ಟಿ ತುಕ್ಕಣ್ಣ, ಮಾಧವರಾಜ್ ಕಣಜೆ, ರಾಮ ನೀಲಾ, ಬಸವರಾಜ ಪಾರಶೆಟ್ಟಿ, ಚಂದ್ರಕಾಂತ ಸ್ವಾಮೀಜಿ ಮತ್ತಿತರರು ಇದ್ದರು.
ಜಾತ್ರಾ ಮಹೋತ್ಸವ ಮಾ. 22 ರ ವರೆಗೆ ನಡೆಯಲಿದೆ.