ಧೈರ್ಯದಿಂದ ಪರೀಕ್ಷೆ ಎದುರಿಸಿ
ಬೀದರ್:ಮಾ.18: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಧೈರ್ಯದಿಂದ ಎದುರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಹೇಳಿದರು.
ನಗರದ ಕುಂಬಾರವಾಡ ರಸ್ತೆಯಲ್ಲಿ ಇರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯೋಜನಾ ಬದ್ಧವಾಗಿ ಪರೀಕ್ಷೆ ಸಿದ್ಧತೆ ನಡೆಸಬೇಕು. ವಿಷಯ ಮನದಟ್ಟು ಮಾಡಿಕೊಳ್ಳುವ ದಿಸೆಯಲ್ಲಿ ಪಠ್ಯಕ್ರಮ ಪುನರಾವರ್ತನೆ ಮಾಡಬೇಕು ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಲು ಪ್ರಯತ್ನಿಸಬೇಕು. ಈ ಮೂಲಕ ಜಿಲ್ಲೆಯ ಫಲಿತಾಂಶ ಉತ್ತಮಪಡಿಸಲು ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನೂ ಹೇಳಿಕೊಡುವ ಅವಶ್ಯಕತೆ ಇದೆ ಎಂದು ನುಡಿದರು.
ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿ, ಶಾಲೆಯು ಮಕ್ಕಳಿಗೆ ಸಂಸ್ಕಾರಯುತವಾದ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ಇದರಿಂದಾಗಿ ಪ್ರತಿ ವರ್ಷ ಉತ್ತಮ ಫಲಿತಾಂಶ ಗಳಿಸುತ್ತಿದೆ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಶೀಲಾ ಚಿಕ್ಕಬಸೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನೋಡಲ್ ಅಧಿಕಾರಿ ಸಚ್ಚಿದಾನಂದ, ಶಾಲೆ ಆಡಳಿತಾಧಿಕಾರಿ ಸುನೀತಾ, ಪ್ರಾಚಾರ್ಯೆ ಡೆನಿಟಾ ಇದ್ದರು.