ಭಾಲ್ಕಿ ತಾಲ್ಲೂಕು 2 ಕಡೆ ಟ್ಯಾಂಕರ್ ಮೂಲಕ ನೀರು
ಬೀದರ್:ಮಾ.18: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತಳವಾಡ-ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಧಾರಜವಾಡಿ ತಾಂಡಾ ಮತ್ತು ತಾಲ್ಲೂಕಿನ ಭಾತಂಬ್ರಾ ಗ್ರಾಮದ ಮೂರು ಕಡೆ ಹೀಗೆ ಎರಡು ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ತಿಳಿಸಿದರು.
ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತ ರಿಸಿದ ಅವರು 25 ಮನೆಗಳನ್ನು ಒಳಗೊಂಡಿರುವ ಧಾರಜವಾಡಿ ತಾಂಡಾಗೆ ಪ್ರತಿ ದಿನ ಒಂದು ಟ್ಯಾಂಕರ್‍ನ ಒಂದು ಟ್ರಿಪ್ ಮತ್ತು ಭಾತಂಬ್ರಾ ಗ್ರಾಮಕ್ಕೆ ನಿತ್ಯ ಒಂದು ಟ್ಯಾಂಕರ್‍ನ ಮೂರು ಟ್ರಿಪ್‍ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಂಭವನೀಯ ಸಮಸ್ಯೆ ಎದುರಿಸಲಿರುವ 152 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸಲು ಜಿಲ್ಲೆಯ 49 ಕಡೆಗಳಲ್ಲಿ ಬಾಡಿಗೆ ಆಧಾರದ ಮೇಲೆ ಪಡೆಯಲು ಖಾಸಗಿ ಬೋರ್‍ವೆಲ್ ಗಳನ್ನು ಗುರುತಿಸಿ ಇವುಗಳಲ್ಲಿ 15ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಖಾಸಗಿ ಜಲ ಮೂಲಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುವ ಅಧಿಕಾರವನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.