ನಾಳೆ ಸಿಡಿ ಬಂಡಿ ರಥೋತ್ಸವದುರ್ಗಮ್ಮ ದೇವಸ್ಥಾನದ ಸುತ್ತಮುತ್ತ ಬ್ಯಾನರ್ ನಿಷೇಧ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸಾ,18-  ನಗರದ  ಕನಕದುರ್ಗಮ್ಮ ದೇವಸ್ಥಾನದಲ್ಲಿ ನಾಳೆ  ಸಿಡಿಬಂಡಿ ರಥೋತ್ಸವ ನಡೆಯಲಿದೆ. ದೇವಿಯ ದರ್ಶನ ಬೆಳಗಿನ ಜಾವ 3 ರಿಂದ ರಾತ್ರಿ 11-30 ರ ವರೆಗೆ ಇರುತ್ತದೆ. ಪ್ರತಿವರ್ಷದಂತೆ ದೇವಿಗೆ ಸ್ವರ್ಣ ಮುಖಕವಚದ ವಿಶೇಷ ಅಲಂಕಾರ ಮಾಡಲಿದೆ. ದೇವಸ್ಥಾನ ಮತ್ತು ಪ್ರಾಂಗಣ ಹೂವಿನ ಅಲಂಕಾರದಿಂದ ಕಂಗೊಳಿಸಲಿದೆ.
ಭಕ್ತ ಸಮೂಹ ದರ್ಶನ ಪಡೆಯಲು ಸಾಲಿನ(ಕ್ಯೂ) ವ್ಯವಸ್ಥೆ, ಜೊತೆಗೆ ನೆರಳು ಮತ್ತು ಕುಡಿಯುವ ನೀರು, ಪ್ರಸಾದ ವಿತರಣೆ  ಇರಲಿದೆ‌
ದೇವಸ್ಥಾನದ ಮುಖ್ಯದ್ವಾರದ ರಾಜಗೋಪುರದ ಒಳಗೆ ಈ ಬಾರಿ ಅಷ್ಟಲಕ್ಷ್ಮಿ ದುರ್ಗೆ ಮತ್ತು ಪಂಚಮುಖಿ ದುರ್ಗೆ ಅವರ ಚಿತ್ರ ಬಿಡಿಸಲಾಗಿದ್ದು ಇವು ಭಕ್ತರ ಗಮನ ಸೆಳೆಯಲಿವೆ‌.
ಈ ವರೆಗೆ ಮಣ್ಣಿನಿಂದ ಕೂಡಿದ್ದ ದೇವಸ್ಥಾನದ ಆವರಣವನ್ನು ಫೆಬಲ್ಸ್ ಮೂಲಕ ಧೂಳು ರಹಿತವಾಗಿ ಮಾಡಿದೆ.
 ರಥೋತ್ಸವ:
ಸಿಡಿಬಂಡಿ ರಥೋತ್ಸವ  ನಾಳೆ ಸಂಜೆ ನಡೆಯಲಿದ್ದು‌‌. ಇಂದು  ಸಂಜೆ ಅಲಂಕೃತಗೊಂಡ ಸಿಡಿ ಬಂಡಿಯನ್ನು ಕೌಲ್ ಬಜಾರ್ ಪ್ರದೇಶದಿಂದ ಭಕ್ತರು ದೇವಸ್ಥಾನದ ಆವರಣಕ್ಕೆ ತರಲಿದ್ದಾರೆ.
ನಾಳೆ ಸಂಜೆ ಮೂರು ಜೋಡಿ ಎತ್ತುಗಳ ಮೂಲಕ ಸಿಡಿಬಂಡಿಯ ಪ್ರದಕ್ಷಿಣಿ ದೇವಸ್ಥಾನದ ಬಳಿ ನಡೆಯಲಿದೆ. ಈ ಸಿಡಿ ಬಂಡಿ ರಥೋತ್ಸವ ನೋಡಲು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ.
ಬ್ಯಾನರ್ ನಿಷೇಧ:
ಸಿಡಿಬಂಡಿ ಪ್ರದಕ್ಷಿಣೆಯನ್ನು ಎಲ್ಲಾರಿಗೂ ಕಾಣುವ ರೀತಿಯಲ್ಲಿ ಇರಲು ದೇವಸ್ಥಾನದ ಸುತ್ತಮುತ್ತ ಯಾವುದೇ ಪ್ಲೆಕ್ಸ್, ಬ್ಯಾನರ್ ಹಾಕದಂತೆ ನಿಷೇಧಿಸಿದೆ. ದೇವಸ್ಥಾನದಲ್ಲಿ ಮತ್ತು ದೇವಸ್ಥಾನದ ಸುತ್ತ ಮುತ್ತ  ಪ್ರಸಾದ, ಮಜ್ಜಿಗೆ ಮತ್ತು ಪಾನಕ ಹಂಚುವುದನ್ನು ಸಹ ನಿಷೇಧಿಸಿದೆ.
ಹಂಚಿಕೆ ಮಾಡುವವರು ಆರೋಗ್ಯ ಇಲಾಖೆಯ ಅನುಮತಿ ಪಡೆದು ತಾಳೂರು ರಸ್ತೆ, ಕಪಗಲ್ಲು ರಸ್ತೆ ಮತ್ತು ಮೋಕ ರಸ್ತೆಯಲ್ಲಿ ಹಂಚಬಹುದು
ದೇವಸ್ಥಾನದ ಆವರಣದಲ್ಲಿ ಮತ್ತು ದೇವಸ್ಥಾನ ಹೊಂದಿಕೊಂಡು ಕಂಪೌಂಡಿಗೆ ತೆಂಗಿನಕಾಯಿ ಹೂವು ಮಾರಾಟ ಮಾಡುವುದನ್ನು ಸಹ ನಿಷೇದಿಸಿದೆ ಎಂದು ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.