ಕಾಯಕದಿಂದ ಮಕ್ಕಳ ಉತ್ತಮ ಭವಿಷ್ಯ-ನ್ಯಾಯಧೀಶ
ರಾಯಚೂರು.ಮಾ.೧೮- ಮಕ್ಕಳನ್ನು ಕಾಯಕ ಜೀವಿಗಳನ್ನಾಗಿ ಮಾಡುವುದರ ಮೂಲಕ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದು ಪೋಷಕರು ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ವಿಶ್ರಾಂತ ನ್ಯಾಯಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಹೇಳಿದರು.
ಅವರಿಂದು ಮಾತೋಶ್ರೀಮಹಾಂತಮ್ಮ ಶಿವಬಸಪ್ಪ ಗನಾಳ್ ಪ್ರತಿಷ್ಠಾನ ಹಾಗೂ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ೧೪ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ರಂಗಮಂದಿರದಲ್ಲಿ ಆಯೋ ಜಿಸಲಾದ ಮಹಾಂತಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ದಲ್ಲಿ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಸ್ತು ಪಾಲನೆ ಜೊತೆಗೆ ಕಾಯಕದಲ್ಲಿ ನಿರಂತರವಾಗಿ ತೋಡುಗಿಸಿಕೊಳ್ಳುವ ರೀತಿಯಲ್ಲಿ ಅವರನ್ನು ಬೆಳಸಬೇಕೆಂದು ಒತ್ತಾಯಿಸಿದ್ದಾರೆ. ಸಮಾಜದಲ್ಲಿ ಹಣಕ್ಕೆ ಬೆಲೆ ಸಿಗುವುದಿಲ್ಲ. ಹಣದ ಹಿಂದೆ ಬೀಳುವ ವ್ಯಕ್ತಿತ್ವದ ಬದಲಾಗಿ, ಸಮಾಜದಲ್ಲಿ ಉತ್ತಮ ನಾಗರಿಕತೆಗೆ ಮಾದರಿಯಾಗಿ ಬೆಳೆಯುವ ಅಗತ್ಯವಿದೆ.
ಭ್ರಷ್ಟಾಚಾರ, ಜಾತಿ ಮತ್ತು ಅಪರಾಧ ಚಟುವಟಿಕೆಗಳಿ೦ದ ಮುಕ್ತವಾಗಿ ಗೌರವದ ಹಾಗೂ ಜಾಗೃತಿಯ ಜೀವನ ನಿರ್ವಹಿಸಬೇಕು, ಬದಲಾವಣೆ ನನ್ನಿಂದ ಸಾಧ್ಯ ವಿಲ್ಲ ಎನ್ನುವ ಅಸಹಾಯಕತೆಗಿಂತ ಸಮಾಜದಲ್ಲಿ ಬದಲಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಅದರೊಂದಿಗೆ ನಾವು ನಮ್ಮನ್ನು ಬದಲಾಯಿಸಿಕೊಳ್ಳುವ ಮುಕ್ತ ಗುಣ ಹೊಂದುವುದು ಅಗತ್ಯವಾಗಿದೆ.
ಲೋಕಸಭೆ ಚುನಾವಣೆಗಳು ಘೋಷಣೆಗೊಂಡಿವೆ. ಪ್ರಜಾಪ್ರಭುತ್ವ ರಕ್ಷಣೆ ಮತ್ತು ಸಾಮಾಜಿಕ ವ್ಯವಸ್ಥೆ ಅತ್ಯುತ್ತಮ ಗೊಳಿಸಲು ಪ್ರತಿ ಮತದಾರ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅಗತ್ಯವಿದೆ. ಪ್ರತಿ ಮತಕ್ಕೆ ತನ್ನದೇ ಆದ ಶಕ್ತಿ ಇದೆ ಎನ್ನುವುದನ್ನು ಮತ ಚಲಾವಣೆಯ ಮೂಲಕ ಪ್ರದರ್ಶಿಸಬೇಕಾಗಿದೆ. ಪ್ರತಿಯೊಬ್ಬರೂ ಮತ ಚಲಾವಣೆ ಮಾಡುವುದು ಮಾತ್ರವಲ್ಲ ತನ್ನೊಂದಿಗಿನ ಎಲ್ಲರನ್ನು ಮತದಾನಕ್ಕಾಗಿ ಪ್ರೇರೇಪಿಸುವ ಮುಂದಾಳತ್ವವನ್ನು ವಹಿಸಬೇಕಾಗಿದೆ.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇರ್ಖ ಪಾಟೀಲ್ ಮಿರ್ಜಾಪುರ ಅವರು ಈ ರೀತಿಯ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ. ಸಾಧಕರ ಪ್ರಶಸ್ತಿ ಪ್ರಧಾನ ಅವರ ಜವಾಬ್ದಾರಿಯನ್ನು ಹೆಚ್ಚಿಸುವ ಮತ್ತು ಮತ್ತೊಬ್ಬರಿಗೆ ಈ ಬಗ್ಗೆ ಮಾದರಿ ಪ್ರೇರಣೆಯಾಗುತ್ತದೆ. ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ಬಸವನಗೌಡ ಅವರು ಮಾತನಾಡುತ್ತ, ಮಕ್ಕಳನ್ನು ನಾವು ಕಾಯಕ ಜೀವಿಗಳನ್ನಾಗಿ ಬೆಳೆಸಬೇಕು. ಪಿಜ್ಜಾ, ಬಗರ್ರ ತಿನ್ನಿಸುವ ವ್ಯಸನಗಳಿಂದ ಮುಕ್ತಗೊಳಿಸಿ ಗ್ರಾಮಗಳಲ್ಲಿರುವ ಹೊಲಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ರೂಪಿಸಬೇಕು. ಈ ರೀತಿ ಆರೋಗ್ಯ ಜೀವನ ರಕ್ಷಣೆಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶರಣಪ್ಪ ಗೋನಾಳ್ ಪ್ರತಿಭಾ ಗೋನಾಳ್ ಸೇರಿದಂತೆ ಅನೇಕ ಗಣ್ಯರು ಮತ್ತು ಮಹಾಸ್ವಾಮಿಗಳು ಉಪಸ್ಥಿತರಿದ್ದರು.