ನಿಷ್ಪಕ್ಷಪಾತವಾಗಿ ಮತದಾನ ಮಾಡಲು ಕರೆ
ಚನ್ನಮ್ಮನ ಕಿತ್ತೂರು,ಮಾ.18: ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ದೇಶದ ಬೆಳವಣಿಗೆ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಮತದಾರರ ಪಾತ್ರ ಮುಖ್ಯ ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಅದು ನಿಮ್ಮಹಕ್ಕು ತಪ್ಪಿಸಿಕೊಳ್ಳದೇ ಮತದಾನ ಮಾಡಬೇಕೆಂದು ತಾಪಂ ಸಹಾಯಕ ನಿರ್ದೆಶಕ ಲಿಂಗರಾಜ ಹಲಕರ್ಣಿಮಠ ಹೇಳಿದರು.
ತಾಲೂಕಿನ ಅಂಬಡಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ವ್ಯಕ್ತಿಯ ಮತವೂ ಮಹತ್ವವಾದುದು. ಹಣ, ಹೆಂಡ ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ಎಂದರು.
ಸಹಾಯಕ ನಿರ್ದೇಶಕ ಸುರೇಶ್ ನಾಗೋಜಿ ಮಾತನಾಡಿ, ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ನಿಮ್ಮ ಪ್ರತಿ ಮತ ಮಹತ್ವದ್ದಾಗಿದ್ದು ಇದ್ದರಿಂದ ಒಳ್ಳೆಯ ರಾಷ್ಟ್ರ ನಿರ್ಮಿಸಲು ಸಾಧ್ಯವೆಂದರು.
ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಉಡಕೇರಿ, ಐಇಸಿ ಸಂಯೋಜಕಿ ಎಸ್ ಬಿ ಜವಳಿ, ತಾಂತ್ರಿಕ ಸಹಾಯಕ ಪರಶುರಾಮ ರಂಗಪುರಿ, ಬಿಎಫ್ಟಿ ಕಲ್ಲಪ್ಪ ಚಕಡಿ, ಗ್ರಾಮ ಕಾಯಕಮಿತ್ರ ನಂದಾ ಸುಳೇಬಾವಿ ಸೇರಿದಂತೆ ಮನರೆಗಾ ಕೂಲಿಕಾರರು ಹಾಗೂ ಗ್ರಾಮಸ್ಥರು ಇದ್ದರು.