ತಾಯಂದಿರು ಮಕ್ಕಳಲ್ಲಿ ಸಂಸ್ಕಾರ, ಮೌಲ್ಯಗಳನ್ನು ಬೆಳೆಸಿ:ಸುನೀತಾ ರಾಣಿ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.18: ಹೆಣ್ಣು ಎಂದರೆ ಅಬಲೆ, ಅಶಕ್ತಳು ಮತ್ತು ಅಸಮರ್ಥಳೂ ಅಲ್ಲ. ತನ್ನ ಆಸೆ-ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಕೇವಲ ಇತರರಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಡುವ ತ್ಯಾಗಮಂಯಿ ಎಂದು ಸುನೀತಾ ರಾಣಿ ಪಾಟೀಲ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಹವಾಲ್ದಾರ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
“ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ಆಳಬಲ್ಲದು” ಎಂಬ ನಾಣ್ಣುಡಿಯಂತೆ, ಅವಕಾಶಗಳು ಸಿಕ್ಕಾಗಲೆಲ್ಲ ಅವುಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆಯಿಂದಲೇ ಮುನ್ನಡೆಯುತ್ತಿರುವ ಧೀಮಂತೆಯಾಗಿದ್ದಾಳೆ. ಪ್ರತಿಯೊಂದು ಮನೆ ಓಳಗೂ ಹೊರಗೂ ದುಡಿದು ಕುಟುಂಬವನ್ನು ಪೋಷಿಸುವ, ಸಲಹುವ ಮತ್ತು ಜವಾಬ್ದಾರಿಯ ನೊಗವನ್ನು ಹೊರಲು ಪತಿಗೆ ಹೆಗಲಿಗೆ ಹೆಗಲು ಕೊಡುವ ಸತಿಯಾಗಿದ್ದಾಳೆ ಎಂದರು.
ಪರಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಮಹಿಳೆಯು ನಮ್ಮ ಭಾವೀ ಸಮಾಜದ ನಿಜವಾದ ಶಿಲ್ಪಿಗಳು ಇದ್ದಂತೆ. ಹೆಣ್ಣೆಂದರೆ ಅದೊಂದು ಅದ್ಭುತ ಶಕ್ತಿ, ವ್ಯಕ್ತಿಯ ಮನ, ಮನೆ ಬೆಳಗುವ ಪ್ರಭೆಯಂತೆ ಇಡೀ ಕುಟುಂಬ ಸದಸ್ಯರು, ಸಮಾಜವನ್ನು ತಿದ್ದಿ-ತೀಡಿ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ಆಕೆಯ ಪಾತ್ರ ಅನನ್ಯವಾದುದು ಎಂದರು.
ಸಿದ್ದಮ್ಮ ಓತಿಹಾಳ, ಎಸ್.ಬಿ. ಬಿರಾದಾರ ಇತರರು ವೇದಿಕೆಯ ಮೇಲಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಹಿರಿಯರಾದ ಭರಮಣ್ಣ ಕಡಕೋಳ, ಎಸ್.ಎ. ಅವಜಿ, ಶಿವಾನಂದ ಹಡಪದ, ಬಾಬು ಮುಳವಾಡ, ವಿಠ್ಠಲ ಜಗತಾಪ, ಪ್ರೊ. ಬಿ.ಎಸ್. ಬೆಳಗಲಿ, ಶ್ರೀಶೈಲ ಬೀಳೂರ, ಬಸಯ್ಯ ಮಠಪತಿ, ದೇವಸ್ಥಾನದ ಪದಾಧಿಕಾರಿಗಳಾದ ಕಸ್ತೂರಿ ಸಾವಳಗಿ, ಜ್ಯೋತಿ ಹಿರೇಮಠ, ಸಾವಿತ್ರಿ ಅಗ್ರಾಣಿ, ಅಂಬಿಕಾ ರಜಪೂತ, ಭಾರತಿ ಪಾಟೀಲ, ಸಾವಿತ್ರಿ ಮಠಪತಿ ಇತರರು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಸುತ್ತಮುತ್ತಲಿನ ಎಲ್ಲ ಬಡಾವಣೆಯ ನೂರಾರು ಮಕ್ಕಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.