ಮಹಿಳೆಯರ ಆತ್ಮವಿಶ್ವಾಸದ ಹೋರಾಟದ ಬದುಕು ನಮಗೆ ಚೈತನ್ಯವಾಗಬೇಕಿದೆ: ಎನ್. ಶೋಭಾ ಲೋಕನಾಗಣ್ಣ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.18: ಮಹಿಳೆಯರ ಮೇಲಿನ ದೌರ್ಜನ್ಯವು ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಹಾಗೆಯೇ ಪ್ರತಿರೋಧ ಮತ್ತು ಹೋರಾಟಗಳನ್ನೂ ಮಹಿಳೆಯರು ನಡೆಸಿಕೊಂಡೇ ಬಂದಿದ್ದಾರೆ. ಪ್ರತಿಯೊಂದು ಕಾಲಘಟ್ಟದಲ್ಲೂ ಹಿಂಸೆ, ಅನ್ಯಾಯ ಮತ್ತು ಅಸಮಾನತೆಗಳನ್ನು ಎದುರಿಸಿರುವ ಮಹಿಳೆಯರ ಆತ್ಮವಿಶ್ವಾಸದ ಹೋರಾಟದ ಬದುಕು ನಮಗೆ ಚೈತನ್ಯವಾಗಬೇಕಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶೋಭಾ ಲೋಕನಾಗಣ್ಣ ಹೇಳಿದರು.
ನಗರದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಜಿಲ್ಲಾ ಆಸ್ಪತ್ರೆ ಆವರಣ, ಸರ್ಕಾರಿ ನಸಿರ್ಂಗ್ ಕಾಲೇಜಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳು ಮತ್ತು ವಿಜಯಪುರ ಘಟಕದವತಿಯಿಂದ ಹಮ್ಮಿಕೊಂಡ ಮಹಿಳಾ ಸಮಾವೇಶ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
190 ವರುಷಗಳ ಹಿಂದೆಯೇ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಟದ ಪರಂಪರೆಯನ್ನೇ ಕಟ್ಟಿದ ಅನನ್ಯ ಹೋರಾಟಗಾರರೂ, ಮೊದಲ ಮಹಿಳಾ ಶಿಕ್ಷಕರೂ ಆದ ಸಾವಿತ್ರಿಬಾಯಿ ಪುಲೆ ಅವÀರನ್ನು ನೆನೆಯುತ್ತಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ವಲಯದಲ್ಲಿ ನಾಡು ಕಂಡ ಧೀಮಂತ ಹೋರಾಟಗಾರರಾದ ಕಾಮ್ರೆಡ್ ಮೇರಿ ದೇವಾಸಿಯಾರವರ ಹೋರಾಟದ ಹೆಜ್ಜೆಗಳನ್ನು ಸಹ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಇಂದು ಸಮಾಜದಲ್ಲಿ ಮಹಿಳೆಯರನ್ನು ಹಾಗೂ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಮನುವಾದಿಗಳು ಮಾಡುತ್ತಿರುವುದು ವಿಷಾದದ ಸಂಗತಿ. ಸಮಾಜದಲ್ಲಿ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯಗಳು ನಿತ್ಯ ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ. ಅದಕ್ಕೆ ಮಹಿಳೆಯರ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ. ಸಮಾಜವು ಇಂದು ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸಿದೆ. ಆದರೆ ಅವರ ವ್ಯಕ್ತಿತ್ವ ಘನತೆಗೆ ಬೆಲೆ ನೀಡುತ್ತಿಲ್ಲ. ಮಹಿಳೆಯರು ಎಷ್ಟು ಬುದ್ಧಿವಂತೆಯಿದ್ದರೂ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ನಾವು ಸುಂದರವಾದ ದೇಶ ಜಗತ್ತು ನೋಡುತ್ತಿದ್ದೇವೆ ಎಂದರೆ ಅದಕ್ಕೆ ಮಹಿಳೆಯರೇ ಕಾರಣ. ಪ್ರತಿದಿನವೂ ಮಹಿಳಾ ದಿನಾಚರಣೆ ಆಚರಣೆಯಾಗಲಿ. ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಮನೆಯೇ ಶೃಂಗಾರವಾಗಿರುತ್ತದೆ. ಪ್ರತಿಯೊಬ್ಬರು ಹೆಣ್ಣನ್ನು ಪೋಷಿಸಿ ಬೆಳೆಸಬೇಕಿದೆ. ಹೆಣ್ಣುಮಕ್ಕಳಾದರೆ ಮೂಗು ಮುರಿಯುತ್ತಾರೆ. ಅದು ತಪ್ಪು. ಹೆಣ್ಣೆಂದರೆ ಶಕ್ತಿ. ಹೆಣ್ಣಿಲ್ಲದ ಬಾಳು ನಶ್ವರ. ಗಂಡು – ಹೆಣ್ಣು ಸರಿಸಮಾನರು. ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ ಎಂದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ ಜೀಬಿ ಮಾತನಾಡಿ, ರಾಜ್ಯದ ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳನ್ನು ಹೆಚ್ಚು ಮಹಿಳಾ ಸ್ನೇಹಿಯಾಗಿ ಮಾಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಎರಡು ಕಡೆಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಗೃಹಗಳನ್ನು ನಿರ್ಮಿಸಬೇಕು. ಸಾರ್ವಜನಿಕ ಜನಸಂದಣಿಯ ಪ್ರದೇಶಗಳಲ್ಲಿ ಉಚಿತ ಶೌಚಾಲಯಗಳನ್ನು ಒದಗಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮೀಸಲು ಆಸನವನ್ನು ಕಡ್ಡಾಯವಾಗಿ ನೀಡುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್. ಜೈಕುಮಾರ್ ಮಾತನಾಡಿ, ನವ ಉದಾರೀಕರಣದಲ್ಲಿ ಹಣಕಾಸು ಮಾರುಕಟ್ಟೆಯ ಆರ್ಥಿಕತೆಗೆ ಲಾಭವೇ ಮುಖ್ಯ ಉಸಿರು. ಈ ಲಾಭಬಡುಕ ಸಂಸ್ಕøತಿಗೆ ಹೆಣ್ಣು ಒಂದು ಸರಕು ಮಾತ್ರ. ಈ ಸರಕು ಆರ್ಥಿಕತೆಗೆ ಕೋಮುವಾದಿ ರಾಜಕಾರಣವೂ ಸೇರಿಕೊಂಡು ಮಹಿಳೆಯರ ಮೇಲಿನ ದಾಳಿ ವಿಭಿನ್ನ ಸ್ವರೂಪಗಳನ್ನು ತಳೆದಿದೆ. ಮಹಿಳೆಯರು ಉಡುವ ಬಟ್ಟೆ, ತೊಡುವ ರೀತಿ ತಿನ್ನುವ ಆಹಾರ, ಸಾರ್ವಜನಿಕ ಭಾಗವಹಿಸುವಿಕೆ ಎಲ್ಲದಕ್ಕೂ ನೀತಿ ನಿಯಮಾವಳಿಗಳನ್ನು ಹೊರೆÀಸಿ, ಅವರ ಸ್ವಾತಂತ್ರ್ಯವನ್ನು ಅಪಹರಣ ಮಾಡಲಾಗುತ್ತಿದೆ. ದಲಿತ, ಆದಿವಾಸಿ, ಅಲ್ಪಸಂಖ್ಯಾತ, ಲಿಂಗಾಂತರಿಗಳ ಮೇಲೆ ತೀವ್ರತರ ಹಲ್ಲೆ, ಹಿಂಸೆಗಳು ನಡೆಯುತ್ತಿವೆ. ಅವರ ಬದುಕುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಇಂದು ರಾಜಾರೋಷವಾಗಿ ಹಾಡ ಹಗಲಿನಲ್ಲೇ ವಯಸ್ಸಿನ ಬೇಧವಿಲ್ಲದೆ ಮಹಿಳೆಯರ ಮೇಲೆ ಆಕ್ರಮಣ, ಅತ್ಯಾಚಾರ, ಹಿಂಸೆ, ತಾರತಮ್ಯ ನಡೆಯುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಲಿಂಗ ಆಯ್ಕೆಯ ಗರ್ಭಪಾತ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ದಬ್ಬಾಳಿಕೆ, ಬಾಲ್ಯವಿವಾಹ, ಲೈಂಗಿಕ ದುರ್ನಡತೆ, ಆ್ಯಸಿಡ್ ದಾಳಿ, ಬಲಾತ್ಕಾರ, ವರದಕ್ಷಿಣೆ, ಮಾನವ ಕಳ್ಳ ಸಾಗಾಣಿಕೆ, ಮರ್ಯಾದೆಗೇಡು ಹತ್ಯೆ ಮುಂತಾದ ಮಹಿಳೆಯರ ಸಮಸ್ಯೆಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆಳುವ ಸರಕಾರಗಳು, ಮಹಿಳೆಯರ ದುಡಿಯುವ ಹಕ್ಕಿನ ಬಗ್ಗೆಯಾಗಲಿ ಅಥವಾ ಸಾಮಾಜಿಕ ಭದ್ರತೆಯ ಕುರಿತ ಕಾಳಜಿಯಾಗಲಿ, ತೋರಿಸುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಖಜಾಂಚಿ ಟಿ.ಆರ್. ವೇದಾವತಿ, ಅಂಜುಮನ್ ಕಾನೂನು ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಚೆನ್ನರಡ್ಡಿ ಏಮಂಟಿ, ಶಾಂತಗೌಡ ಬಿರಾದಾರ, ಅಶೋಕ ಇಲಕಲ್, ಬಸವರಾಜ ಜೀಬಿ, ಎ.ಐ. ಮಾಶ್ಯಾಳ, ಆರ್.ಎಸ್. ಮೆಣಸಗಿ, ಚಂದ್ರಶೇಖರ ಲೆಂಡಿ, ಅಂಬಿಕಾ ಹುಬ್ಬಳ್ಳಿ, ನೀಲಮ್ಮ ಹಂದ್ರಾಳ, ಹೇಮಲತಾ ವಸ್ತ್ರದ, ದಾಕ್ಷಾಯಿಣಿ ಹುಡೇದ ಇದ್ದರು.
ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಮಾವೇಶದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳು, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.