ವಿಜಯಪುರ ಜಿಲ್ಲೆ ಕಲೆಯ ತವರೂರು: ಆನಂದ ಜೋಶಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.18:ಕಲಾವಿದರು ನಮ್ಮ ಸಂಸ್ಕøತಿಯ ರಾಯಭಾರಿಗಳು ಇದ್ದಂತೆ. ತಮ್ಮ ಕಲೆಯಿಂದ ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸುವ ಶಕ್ತಿ ಅವರಿಗೆ ಇದೆ. ಕಲೆಗೆ ತವರೂರಾದ ವಿಜಯಪುರ ಜಿಲ್ಲೆ ಅನೇಕ ಕಲಾವಿದರನ್ನು ನೀಡಿದೆ. ಚಿತ್ರಕಲೆ, ಸಂಗೀತ, ಅಭಿನಯ, ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದ ಅಂಬಾದಾಸ ಜೋಶಿಯವರ ಪಾತ್ರ ದೊಡ್ಡದಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಆನಂದ ಜೋಶಿ ಹೇಳಿದರು.
ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಕಲಾವಿದರ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಂಬಾದಾಸ ಜೋಶಿಯವರನ್ನು ಅಭಿನಂದಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದರ ನಿರ್ದೇಶನ ಹಾಗೂ ಹಿರಿಯ ನಟ ನವರಸ ನಾಯಕ ಜಗ್ಗೇಶ ನಟಿಸಿದ ಹೊಸ ಚಿತ್ರ “ರಂಗನಾಯಕ” ಚಿತ್ರದಲ್ಲಿ ಅಭಿನಯಿಸಿ ಜನರಿಂದ ಮೆಚ್ಚುಗೆ ಪಡೆದ ಅಂಬಾದಾಸ ಜೋಶಿಯವರು ಸಕಲಕಲಾವಲ್ಲಭರು ಎಂದರು.
ಇತಿಹಾಸ ತಜ್ಞ ಡಾ. ಆನಂದ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ. ಅವರಿಗೆ ಅವಕಾಶ ನೀಡಿದರೆ ಪ್ರತಿಭೆ ತೋರಿಸಬಲ್ಲರು. ಅಂಬಾದಾಸರು ನಟನೆಯ ಮೂಲಕ ಜಿಲ್ಲೆಯ ಹೆಸರನ್ನು ತಂದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಅಂಬಾದಾಸ ಜೋಶಿ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಕಲಾವಿದರರು ಇದ್ದಾರೆ. ಸುನೀಲ ಸುಧಾಕರ ಅವರು ಈ ಚಿತ್ರದಲ್ಲಿ ನಟಿಸುವದರೊಂದಿಗೆ ನನಗೂ ಅವಕಾಶ ಮಾಡಿಕೊಟ್ಟರು. ಸಿಕ್ಕ ಅವಕಾಶ ಬಳಸಿಕೊಂಡು ಸಮಾಜಕ್ಕೆ ತಮ್ಮ ಕಲೆಯ ಪ್ರತಿಭೆಯನ್ನು ತೋರಿಸಬೇಕು. ಕಲಾವಿದರಿಗೆ ಪ್ರೋತ್ಸಾಹ ಅವಶ್ಯ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘ, ಮಹಿಳಾ ಸಂಘ, ಕಲಾವಿದರ ಸಂಘ, ಸ್ವರಲೋಕ ತಂಡದ ಸದಸ್ಯರು ಅಭಿನಂದಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಎಸ್.ಬಿ.ಐ.ನ ಇಂಚೂರ, ಜಗದೀಶ ಗಲಗಲಿ, ವಿಶ್ವನಾಥ ಕುಲಕರ್ಣಿ, ಶೇಷರಾವ ಮಾನೆ, ಪ್ರಶಾಂತ ಚೌಧರಿ, ಅಮೋಘ ಸಿದ್ದ, ಸಂಪತ್ ಕುಲಕರ್ಣಿ, ದೇವಿಕಾ ತೊರಗಲ, ರೂಪಾ ಕುಲಕರ್ಣಿ, ಗೀತ ಕುಲಕರ್ಣಿ, ಕವಿತಾ ಅವದಾನಿ, ಸವಿತಾ ಎಸ್. ಕುಲಕರ್ಣಿ, ಈರಣ್ಣ ಪಟ್ಟಣಶೆಟ್ಟಿ ಜಿ.ಜಿ. ಕುಲಕರ್ಣಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.