ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ನಿಧನಕ್ಕೆ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ
ಕಲಬುರಗಿ:ಮಾ.17:ಮಾಜಿ ಮುಖ್ಯಮಂತ್ರಿಗಳಾದ ದಿ.ಗುಂಡೂರಾವ್,‌ ದಿ.ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿ ‘ಕರ್ನಾಟಕದ ಇಂದಿರಾ ಗಾಂಧಿ’ ಎಂದು ‌ಖ್ಯಾತರಾಗಿದ್ದ ನಾಗಮ್ಮ ಕೇಶವಮೂರ್ತಿ (90) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ನಿಧನರಾಗಿರುವ ವಿಷಯ ಕೇಳಿ ಅತೀವ ದುಃಖವಾಯಿತು ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ನಾಗಮ್ಮ ಕೇಶವಮೂರ್ತಿ ಮೂರು ಬಾರಿ ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಗುಂಡೂರಾವ್,‌ ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಬೃಹತ್ ಕೈಗಾರಿಕೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವೆಯಾಗಿ ಹಾಗೂ ವಿಧಾನಸಭೆ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಗ್ರಾಮಾಂತರ ಪ್ರದೇಶದಲ್ಲಿ ಹೈಸ್ಕೂಲ್ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಒಂದರಿಂದ ನಾಲ್ಕನೆಯ ತರಗತಿಗಳವರೆಗೆ ಕನ್ನಡ ಕಡ್ಡಾಯ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1955ರಲ್ಲಿ ವನಿತಾ ಸಮಾಜ ಸ್ಥಾಪಿಸಿ 50ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ತೆರೆಯುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರು. ರಾಜಕೀಯಕ್ಕಿಂತಲೂ ಸಮಾಜ ಸೇವೆಯಲ್ಲಿ ಹೆಸರು ಮಾಡಿದ್ದ ನಾಗಮ್ಮ, ಜನರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು.
ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ.