ಯುನೈಟೆಡ್ ಆಸ್ಪತ್ರೆಯ ಸಿಪಿಆರ್ ಮತ್ತು ಬಿಸಿಎಲ್‍ಎಸ್ ತರಬೇತಿ ಶಿಬಿರಕ್ಕೆ ಉತ್ತಮ ಸ್ಪಂದನೆ
ಕಲಬುರಗಿ:ಮಾ.17: ಕಲ್ಯಾಣ ಕರ್ನಾಟಕದ ಮುಂಚೂಣಿ ಆರೋಗ್ಯಸೇವಾದಾತ ಸಂಸ್ಥೆಯಾದ ಯುನೈಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಾಮಾನ್ಯ ಜನರಿಗಾಗಿ ಮತ್ತು ವೈದ್ಯಕೀಯ ವೃತ್ತಿಪರರಿಗಾಗಿ ಸಿಪಿಆರ್ ಮತ್ತು ಬಿಸಿಎಲ್ಎಸ್ ತರಬೇತಿ ಶಿಬಿರಗಳನ್ನು ಏರ್ಪಡಿಸಿತ್ತು.
ನಗರದ ವಿಶ್ವೇಶ್ವರಾಯ ಭವನದಲ್ಲಿ ಶುಕ್ರವಾರ ಮತ್ತು ಶನಿವಾರ ಆಯೋಜಿಸಲಾಗಿದ್ದ ಈ ಶಿಬಿರಗಳಿಗೆ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ. ರಮಣಗೌಡ ಅವರು ನೃತೃತ್ವದ ತಂಡವು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಶಿಬಿರಾರ್ಥಿಗಳಿಗೆ ತಮ್ಮ ಶ್ರೀಮಂತ ಜ್ಞಾನ ಮತ್ತು ಅಪಾರ ಅನುಭವಗಳ ಮೂಲಕ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಈ ಶಿಬಿರಗಳಿಗೆ ಸಾರ್ವಜನಿಕರಿಂದ ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಸಾಮಾನ್ಯ ಜನರಿಗಾಗಿ ಶುಕ್ರವಾರ ನಡೆದ ಮೊದನೇ ದಿನದ ಕಾರ್ಯಾಗಾರದಲ್ಲಿ 120 ಜನರು ಎರಡು ತಂಡಗಳಲ್ಲಿ ತರಬೇತಿ ಪಡೆದರು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಮೊದಲ ತಂಡ ಹಾಗೂ ಮಧ್ಯಾಹ್ನದ ನಂತರ ಎರಡನೇ ತಂಡವು ತರಬೇತಿ ಪಡೆಯಿತು. ಮುಖ್ಯವಾಗಿ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವೈದ್ಯಕೀಯ ವೃತ್ತಿಪರರು ಇಲ್ಲದಿದ್ದಾಗ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದರೆ ಕೂಡಲೇ ಕೈಗೊಳ್ಳಬೇಕಾದ ಜೀವರಕ್ಷಕ ಕ್ರಮಗಳ ಮೊದಲನೇಯ ದಿನದ ಕಾರ್ಯಾಗಾರದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ರೋಗಿಯು ಸಮೀಪದ ಸುಸಜ್ಜಿತ ಆಸ್ಪತ್ರೆಯನ್ನು ತಲುಪುವ ತನಕ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ತರಬೇತುದಾರರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ತೀವ್ರ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ತಡೆಯುವುದು ಹೇಗೆ, ಹೃದಯ ಬಡಿತ ತಕ್ಷಣ ನಿಂತುಹೋದರೆ ಅದನ್ನು ಮರಳಿಸುವುದು ಹೇಗೆ, ಉಸಿರಾಟದಲ್ಲಿ ಏರುಪೇರಾದರೆ ಏನು ಮಾಡಬೇಕು ಮುಂತಾದ ವಿಭಿನ್ನ ರೀತಿಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸಲು ಅವಶ್ಯವಿರುವ ವಿಭಿನ್ನ ರೀತಿಯ ಕ್ರಮಗಳನ್ನು ಹೇಳಿಕೊಡಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಶಿಬಿರಾರ್ಥಿಗೂ ಪ್ರತಿಯೊಂದು ಕ್ರಮವನ್ನೂ ಪ್ರತ್ಯಕ್ಷಿಕೆ ಮಾಡಿತೋರಿಸುವುದಕ್ಕೆ ಅವಕಾಶ ನೀಡಲಾಗಿತ್ತು.
ವೈದ್ಯಕೀಯ ವೃತ್ತಿಪರರಿಗಾಗಿ ನಡೆದ ಎರಡನೇ ದಿನದ ಕಾರ್ಯಾಗಾರದಲ್ಲಿ 60 ವೃತ್ತಿಪರರು ಭಾಗವಹಿಸಿದ್ದರು. ವಿಶೇಷವಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ನರ್ಸ್‍ಗಳು, ವೈದ್ಯಕೀಯ, ಹೋಮಿಯೋಪತಿ ಮತ್ತು ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಜೀವರಕ್ಷಕ ಕ್ರಮಗಳ ಬಗ್ಗೆ ತಮ್ಮ ಜ್ಞಾನ ಹೆಚ್ಚಿಸಿಕೊಂಡರು.
ಎರಡನೇಯ ದಿನದ ಕಾರ್ಯಾಗಾರದಲ್ಲಿ ಸಿಪಿಆರ್ ಬಗ್ಗೆ ಮಾತ್ರವಲ್ಲದೇ ಬಿಸಿಎಲ್ಎಸ್ ಜೀವರಕ್ಷಕ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಎಇಡಿ ಯಂತ್ರವನ್ನು ಉಪಯೋಗಿಸುವುದು ಹೇಗೆ, ವ್ಯಕ್ತಿಯೊಬ್ಬರಿಗೆ ಉಸಿರುಗಟ್ಟಿದರೆ ಅಥವಾ ಹೃದಯ ಬಡಿತ ನಿಂತರೆ ಏನು ಮಾಡಬೇಕು ಎಂಬುದಲ್ಲದೇ ಒಂದು ವರ್ಷದೊಳಗಿನ ಶಿಶುಗಳ ಆರೋಗ್ಯ ದೀಢೀರ್ ಏರುಪೇರಾದರೆ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಶಿಬಿರಾರ್ಥಿಗಳಿಗೆ ಹೇಳಿಕೊಡಲಾಯಿತು.
“ಕಾರ್ಯಾಗಾರದಿಂದ ನಾನು ಅನೇಕ ಉಪಯುಕ್ತ ವಿಷಯಗಳನ್ನು ಕಲಿತುಕೊಂಡೆ. ಕಳೆದ ಅನೇಕ ವರ್ಷಗಳಿಂದ ನಾನು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ನನಗೆ ಗೊತ್ತಿರದ ಅನೇಕ ವಿಷಯಗಳನ್ನು ಕಲಿಯಲು ಈ ಕಾರ್ಯಾಗಾರ ನೆರವಾಯಿತು. ಎಯಿಡಿ ಯಂತ್ರದ ಬಳಕೆಯನ್ನು ಕಲಿತದ್ದು ತುಂಬಾ ವಿಶೇಷ ಎನಿಸಿತು,” ಎಂದು ಯುನೈಟೆಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಸೌಜನ್ಯ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಕಾರ್ಯಾಗಾರದ ಯಶಸ್ಸಿನ ಬಗ್ಗೆ ಮಾತಾಡಿದ ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆದ ಡಾ. ವಿಕ್ರಮ್ ಸಿದ್ದಾರೆಡ್ಡಿಯವರು ಸಾಮಾನ್ಯ ಜನರಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದ ವೃತ್ತಿಪರರಲ್ಲಿ ವೈದ್ಯಕೀಯ ಜಾಗೃತಿ ಮೂಡಿಸುವುದು ಆಮೂಲಕ ಆರೋಗ್ಯವಂತ ದೇಶ ನಿರ್ಮಾಣತ್ತ ಸಾಗುವುದು ಈ ಕಾರ್ಯಾಗಾರದ ಉದ್ದೇಶ ಎಂದರು.
“ಯುನೈಟೆಡ್ ಆಸ್ಪತ್ರೆಯೂ ಮೊದಲಿನಿಂದಲೂ ಸಾಮಾಜಿಕ ಸೇವೆಗೆ ವಿಶೇಷ ಒತ್ತು ನೀಡುತ್ತಾ ಬಂದಿದೆ. ಈಗ ನಡೆದ ಕಾರ್ಯಾಗಾರವೂ ಆರೋಗ್ಯವಂತ ಸಮಾಜನಿರ್ಮಾಣದತ್ತ ನಾವು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ವೃತ್ತಿಪರರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧುನಿಕ ಆವಿಷ್ಕಾರಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನಗಳ, ಹೊಸ ಹೊಸ ಜೀವರಕ್ಷಕ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾ ತರಬೇತುಗೊಳಿಸುವುದು ಬಹಳ ಮುಖ್ಯ. ಅದೇ ರೀತಿಯಲ್ಲಿ ಸಾರ್ವಜನಿಕರಿಗೂ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ವೈದ್ಯರು ಅಥವಾ ಆಸ್ಪತ್ರೆ ಹತ್ತಿರದಲ್ಲಿ ಇಲ್ಲದಿದ್ದಾಗ ದಿಢೀರನೇ ಆರೋಗ್ಯ ಸಮಸ್ಯೆ ಉಂಟಾದರೆ ಅದನ್ನು ನಿಭಾಯಿಸುವುದಕ್ಕೆ ಅವರಿಗೆ ತರಬೇತಿ ನೀಡುವುದೂ ಅಷ್ಟೇ ಮುಖ್ಯ,” ಎಂದು ಡಾ. ಸಿದ್ದಾರೆಡ್ಡಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಾಗಾರಕ್ಕೆ ಬಂದ ಉತ್ತಮ ಪ್ರತಿಕ್ರಿಯೆಯ ಬಗ್ಗೆ ಮಾತಾಡಿದ ಹಿರಿಯ ನೇತೃತಜ್ಞೆ ಹಾಗೂ ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿಯವರು ಕಾರ್ಯಾಗಾರಕ್ಕಾಗಿ ಬಹಳಷ್ಟು ಜನ ನೋಂದಣಿ ಮಾಡಿಸಿಕೊಂಡಿದ್ದು ಮೊದಲ ದಿನ 120 ಜನರಿಗೆ ಹಾಗೂ ಎರಡನೇ ದಿನ 60 ವೃತ್ತಿಪರರಿಗೆ ತರಬೇತಿ ನೀಡಲಾಯಿತು ಎಂದರಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಕಾರ್ಯಾಗಾರಗಳನ್ನು ಆಯೋಜಿಸಿ ಹೆಚ್ಚೆಚ್ಚು ಜನರನ್ನು ತರಬೇತುಗೊಳಿಸುವುದಾಗಿ ಹೇಳಿದರು.
“ನಾವು ಮನುಷ್ಯ ಜೀವಕ್ಕೆ ಬಹಳ ಮಹತ್ವ ಕೊಡುತ್ತೇವೆ ಹಾಗೂ ಅದನ್ನು ಉಳಿಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಉತ್ತಮ ಆರೋಗ್ಯ ಸೇವೆಗಳನ್ನು ನೀಡುವುದರ ಜೊತೆಗೆ ಜನರಲ್ಲಿ ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಆರೋಗ್ಯ ಜ್ಞಾನ ಹೆಚ್ಚಿಸುವುದರ ಕಡೆಗೂ ನಾವು ವಿಶೇಷ ಗಮನ ಕೊಡುತ್ತಿದ್ದೇವೆ. ಈ ಕಾರ್ಯಾಗಾರ ಯಶಸ್ವಿಯಾಗಿದ್ದು ನನಗೆ ಖುಷಿಯಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸದ್ದವರೆಲ್ಲರೂ ಹೊಸ ಹೊಸ ವಿಷಯಗಳನ್ನು, ಜೀವರಕ್ಷಕ ಕ್ರಮಗಳನ್ನು ಕಲಿತು ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಇಂತಹ ಕೆಲಸಗಳನ್ನು ಮಾಡಲು ನಮಗೆ ಇನ್ನಷ್ಟು ಪ್ರೋತ್ಸಾಹ ನೀಡಿದೆ,” ಎಂದು ಡಾ. ವೀಣಾ ಹೇಳಿದರು.