ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಮಾಡಲ್ಲ : ಚಲುವಾದಿ ನಾರಾಯಸ್ವಾಮಿ
ವಿಜಯಪುರ,ಮಾ.17: ಕೆ.ಎಸ್. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾವುದೇ ಕಾರಣಕ್ಕೂ ಅವರು ಸ್ವತಂತ್ರವಾಗಿ ಲೋಕಸಭೆ ಚುನಾವಣಾ ಕಣಕ್ಕಿಳಿಯುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಸ್ವಾಮಿ ಹೇಳಿದರು.
ಕೆ.ಎಸ್. ಈಶ್ವರಪ್ಪನವರು ಅಸಮಾಧಾನಗೊಂಡ ಬಗ್ಗೆ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವಪ್ಪನವರಲ್ಲಿ ದೊಡ್ಡತನವಿದೆ. ಮನೆಯವರಿಗೂ ಅವರು ಉತ್ತರ ಕೊಡಬೇಕಲ್ಲ. ಆವೇಶದಲ್ಲಿ ಒಂದು ಮಾತನಾಡಿದ್ದಾರೆ ಎಂದರು.
ನನಗೂ ಟಿಕೆಟ್ ಸಿಗಲಿಲ್ಲ ಎಂದರೆ ನಾನು ಹಾಗೆ ಮಾತನಾಡುತ್ತಿದ್ದೆ. ಮಗನಿಗೆ ಟಿಕೆಟ್ ಕೊಡಿಸಲೇಬೇಕು ಎಂದು ಹಠ ಹಿಡಿದಿದ್ದರು. ಈ ತೀರ್ಮಾನ ಮಾಡಿದ್ದು, ಯಡಿಯೂರಪ್ಪನವರು ಅಥವಾ ವಿಜಯೇಂದ್ರ ಅಲ್ಲ. ಕೇಂದ್ರದ ವರಿಷ್ಠರು ಮಾಡಿದ್ದಾರೆ ಎಂದರು.
ನಾವೆಲ್ಲರೂ ಒಂದಾಗಿದ್ದೇವೆ. ಎಲ್ಲರೂ ಸೇರಿ ಪಕ್ಷ ಕಟ್ಟೋಣ. ಮತ್ತೆ ನಮ್ಮ ಸರ್ಕಾರ ಬಂದು ಮತ್ತೊಮ್ನೆ ಮೋದಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದರು.