ಸರ್ಕಾರದಿಂದ ರೈತಪರ ಹೋರಾಟಗಾರರನ್ನು ಹತ್ತಿಕ್ಕುವ ಯತ್ನ
ಅಫಜಲಪುರ: ಮಾ.17:ಶನಿವಾರ ಮಾ. 16 ರಂದು ಕಲಬುರ್ಗಿ ನಗರದ ಎನ್.ವಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಮನವಿ ಪತ್ರ ಸಲ್ಲಿಸಲು ಪೂರ್ವಸಿದ್ಧತೆ ಮಾಡಿಕೊಂಡ ಹಿನ್ನೆಲೆ ಶನಿವಾರ ಬೆಳಗಿನ 6 ಗಂಟೆಯ ಸುಮಾರಿಗೆ ಅಫಜಲಪುರ ಪೆÇಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿಗಳು ಏಕಾಏಕಿ ನಮ್ಮ ಮನೆಗೆ ಆಗಮಿಸಿ ಮಧ್ಯಾಹ್ನ 3 ಗಂಟೆಗೆ ಬಿಡುಗಡೆಗೊಳಿಸಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ದರೋಡೆ ಮಾಡಿಲ್ಲ. ಯಾವುದೇ ಕಾನೂನು ಬಾಹಿರ ಅಕ್ರಮ ಚಟುವಟಿಗಳಲ್ಲಿ ಭಾಗಿಯಾಗಿಲ್ಲ. ಆದರೂ ನಮ್ಮನ್ನು ವಿನಾಕಾರಣ ಬಂಧಿಸುವುದು ಯಾವ ಕಾರಣಕ್ಕಾಗಿ ಎಂದು ಪೆÇಲೀಸ್ ಅಧಿಕಾರಿಗಳು ಉತ್ತರಿಸಬೇಕು. ದೇಶದಲ್ಲಿ ರೈತ ಸಂಕಷ್ಟದಲ್ಲಿದ್ದಾನೆ ನ್ಯಾಯಯುತ ಎಂಎಸ್‍ಪಿ ಬೆಲೆಗಾಗಿ ಹಾಗೂ ರೈತರ ಸಾಲ ಮನ್ನಕ್ಕಾಗಿ ಹಲವಾರು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆ ಹೋರಾಟವನ್ನು ಬೆಂಬಲಿಸಿ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದರೆ ನಮ್ಮನ್ನು ಬಂಧಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಬಂಧಿಸಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ ರೈತರಿಗೋಸ್ಕರ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಈಗಾಗಲೇ ತಾಲೂಕಿನ ಭೀಮಾ ನದಿ ಬತ್ತಿ ಬರಡಾಗಿದೆ. ಉಜನಿ ಜಲಾಶಯದಿಂದ ನೀರು ಹರಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಅಲ್ಲದೆ ಬರಗಾಲದಿಂದ ಬೆಳೆಗಳು ಹಾಳಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಬೇಕು. ಸರ್ಕಾರ ಯಾವುದೇ ಕಾರಣಕ್ಕೂ ನ್ಯಾಯಯುತ ಬೇಡಿಕೆ ಮತ್ತು ತಮ್ಮ ಹಕ್ಕಿನ ಹೋರಾಟಕ್ಕಾಗಿ ಮಾಡುವ ಯಾವುದೇ ರೈತಪರ ಹೋರಾಟಗಾರರನ್ನು ಹತ್ತಿಕ್ಕುವ ಯತ್ನಕ್ಕೆ ಮುಂದಾಗಬಾರದು ಹಾಗೂ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.