ತಾಂತ್ರಿಕ ಕೌಶಲ್ಯ ಬಳಸಿಕೊಂಡು ನರೇಗಾ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ: ಖಾಜಿ
ವಿಜಯಪುರ,ಮಾ.17: ವಿಡಿಯೋ ಮತ್ತು ಫೋಟೊ ಎಡಿಟಿಂಗ್ ಕಾರ್ಯಗಾರದಲ್ಲಿ ಪಡೆದಿರುವ ತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಗ್ರಾಮೀಣ ಜನರಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಕುರಿತು ಜಾಗೃತಿ ಮೂಡಿಸುವ ಮೂಲಕ ಈ ಯೋಜನೆ ಯಶಸ್ವಿಗೆ ಕಾರ್ಯತಂತ್ರಗಳನ್ನು ರೂಪಿಸಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎ. ಖಾಜಿ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಜಿಲ್ಲಾ ಪಂಚಾಯತ್‍ನ ಸಹಯೋಗದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ತಾಲ್ಲೂಕ ಪಂಚಾಯತ್ ಐಇಸಿ ಸಂಯೋಜಕರಿಗಾಗಿ ಆಯೋಜಿಸಿದ್ದ ವಿಡಿಯೋ ಮತ್ತು ಫೋಟೊ ಎಡಿಟಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ವಿಭಾಗದಲ್ಲಿ ಕಾರ್ಯ ಮಾಡುತ್ತಿರುವ ನಿಮಗೆ ಈ ತಂತ್ರಜ್ಞಾನ ಕೌಶಲ್ಯದ ಅಗತ್ಯತೆ ಅನಿವಾರ್ಯ. ನಾವು ಓದುವದರಿಂದ ಕೌಶಲ್ಯಗಳನ್ನು ಕಲಿಯಲು ಸಾಧ್ಯವಿಲ್ಲ. ಅದನ್ನು ನಾವು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಕಾರ್ಯ ವೈಖರಿಯಲ್ಲಿ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯ ಎಂದರು. ಐಇಸಿ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ನಿಮಗೆಲ್ಲ ಶಿಕ್ಷಣ, ಮಾಹಿತಿ ಮತ್ತು ಸಂವಹನ ಕೌಶಲ್ಯ ಅತೀ ಮುಖ್ಯವಾದ ಭಾಗಗಳು. ನೀವು ಸರಕಾರ ಮತ್ತು ಜನರ ನಡುವೆ ಕೆಲಸ ಮಾಡುತ್ತೀರಿ. ನೀವು ಪಡೆದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸ ಬೇಕಾದ ಹೊಣೆ ನಿಮ್ಮ ಮೇಲಿರುತ್ತದೆ. ಮತ್ತು ಅದು ನಿಮ್ಮ ಜವಾಬ್ದಾರಿ ಕೂಡ ಎಂದರು.
ನಮಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಮನಸ್ಸು ಮಾಡಿದರೆ ನಮ್ಮಿಂದ ಎಲ್ಲವೂ ಸಾಧ್ಯ. ನಮ್ಮ ಜೀವನದಲ್ಲಿ ಕಲಿಯಬೇಕಾಗಿದ್ದು ಒಂದೆ ವಿಷಯ ಅದು ಕಠಿಣ ಪರಿಶ್ರಮ. ಪರಿಶ್ರಮದಿಂದ ನಾವು ಎಲ್ಲವನ್ನು ಸಾಧಿಸಬಹುದು. ನಮ್ಮಗುರಿಯನ್ನು ಮುಟ್ಟಬಹುದು ಎಂದು ತಿಳಿಸಿದರು. ನೀವು ಅತ್ಯಂತ ಅದೃಷ್ಟಶಾಲಿ ವ್ಯಕ್ತಿಗಳು ಪ್ರಸ್ತುತ ದಿನಮಾನದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳೆದು ನಿಂತಿದೆ ಎಲ್ಲವೂ ನಿಮ್ಮ ಬೆರಳಲ್ಲೆ ಸಿಗುತ್ತದೆ. ಪ್ರತಿ ಮಾಹಿತಿಯನ್ನೂ ನೀವು ಕ್ಷಣಾರ್ಧದಲ್ಲೇ ಪಡೆಯಬಹುದು ಅಷ್ಟರಮಟ್ಟಿಗೆ ಎಲ್ಲವೂ ಬದಲಾಗಿದೆ ಇದರ ಸದುಪಯೋಗ ಪಡೆದುಕೊಂಡು ನೀವೆಲ್ಲರೂ ಮುಂದೆ ಬನ್ನಿ ಎಂದು ಹಾರೈಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಬಿ.ಮಾಳಗಿ ಮಾತನಾಡಿ, ನೀವು ನಿಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದರೆ ಎರಡೆ ವಿಷಯಗಳನ್ನು ಕಲಿತರಬೇಕು ಏನೆಂದರೆ ಸಮಾಜಕ್ಕೆ ಅವಶ್ಯಕವಾದ ವಿಷಯಗಳಾವವು ಮತ್ತು ಒಬ್ಬ ಅಧಿಕಾರಿಯಾಗಿ ನಾನು ಸಮಾಜಕ್ಕಾಗಿ ಹೇಗೆ ಕೆಲಸ ಮಾಡಬೇಕು ಎಂಬುವುದು ನಮಗೆ ತಿಳಿದಿರಬೇಕು ಎಂದರು.
ಇನ್ನು ನೀವು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕೆಲಸ ಮಾಡುವದರಿಂದ ನಾವು ಮಾತಿನ ಮೂಲಕ ಹೇಳುವ ಬದಲು ವಿಡಿಯೋ ಮತ್ತು ಫೋಟೊಗಳನ್ನು ಬಳಸಿಕೊಂಡು ಅತ್ಯುತ್ತಮವಾಗಿ ಅವರಿಗೆ ತಿಳಿಸಿದಾಗ ಅದು ಅವರಿಗೆ ಪರಿಣಾಮಕಾರಿಯಾಗಿ ತಲುಪುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ನಿಮಗೆ ಸಹಕಾರಿಯಾಗಲಿದೆ ಎಂದರು.
ಈ ಕಾರ್ಯಾಗಾರದಲ್ಲಿ ಹತ್ತು-ಹಲವಾರು ವಿಷಯಗಳ ಕುರಿತು ನಿಮಗೆ ತಿಳಿಸಿ ಕೊಟ್ಟಿದ್ದಾರೆ. ಆ ಎಲ್ಲ ವಿಷಯಗಳನ್ನು ನೀವು ನಿಮ್ಮ ಕೆಲಸದಲ್ಲಿ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದರೆ ಸಾಕು ನೀವು ಯಶಸ್ವಿಯಾಗುತ್ತೀರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರಗೌಡ ಕಾಕಡೆ ಮಾತನಾಡಿ, ಗ್ರಾಮೀಣ ಅಭಿವೃದ್ಧಿಯ ಕಾಳಜಿವುಳ್ಳ ನಿಮ್ಮೆಲ್ಲರ ಜೊತೆ ಬರೀ ಈ ಕಾರ್ಯಾಗಾರದ ಜೊತೆ ಮಾತ್ರ ಅಲ್ಲ ಕಾರ್ಯಾಗಾರ ಮುಗಿದ ನಂತರವೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದರು.
ಗ್ರಾಮೀಣಾಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದದ್ದು ಈ ನಿಟ್ಟಿನಲ್ಲಿ ನಾವು ಕಲಿಸಿದಂತಹ ಎಲ್ಲ ವಿಷಯಗಳನ್ನು, ತಂತ್ರಗಳನ್ನು ನೀವು ಬಳಸಿಕೊಂಡು ಪ್ರತಿನಿತ್ಯ ಕೆಲಸ ಮಾಡಿ ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಕಂಡಾಗ ಮಾತ್ರ ನಾವೆಲ್ಲರೂ ಯಶಸ್ವಿ ಆದ ಹಾಗೆ. ನಿಮ್ಮಲ್ಲಿ ಕಲಿಯುವ ಹಂಬಲ ಸಾಕಷ್ಟಿದ್ದು, ಅದನ್ನು ನೀವು ಮುಂಬರುವ ದಿನಗಳಲ್ಲಿ ಹಾಗೆ ಇಟ್ಟುಕೊಂಡು ಹೋದಲ್ಲಿಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನೀವು ಮಾಡಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಾದ ಸುವರ್ಣಾ ಭಜಂತ್ರಿ, ಶಾಂತು ಊಟಿ, ಬಸು ಹುಣಸಿ, ಪರಮೇಶ ಹೊಸಮನಿ ಹಾಗೂ ಮತ್ತಿತರರು ಈ ಶಿಬಿರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.