“ಪುನಿತ್ ಅಭಿಮಾನಿಗಳಿಂದ ನವಗ್ರಾಮದಲ್ಲಿ ಕುಡಿವ ನೀರಿನ ಅರವಟಿಗೆಗೆ ಚಾಲನೆ”
ಸಂಜೆವಾಣಿ ವಾರ್ತೆ
ಸಿರಿಗೇರಿ.ಮಾ.17. ಸಮೀಪದ ಮುದ್ದಟನೂರು ನವಗ್ರಾಮದ ಬಸ್‍ನಿಲ್ದಾಣದ ಹತ್ತಿರ ಡಾ.ಪುನಿತ್‍ರಾಜಕುಮಾರ ಅವರ ಜನ್ಮದಿನ ಅಂಗವಾಗಿ ನವಗ್ರಾಮದ ಅಪ್ಪು ಅಭಿಮಾನಿಗಳ ಯುವಕರ ತಂಡದಿಂದ ಕುಡಿವ ನೀರಿನ ಅರವಟಿಗೆಯನ್ನು ಪ್ರಾರಂಭಿಸಿದರು. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಕುಡಿವ ನೀರಿನ ಅಭಾವ ತಲೆದೋರಿ ಈಗಾಗಲೇ ಸಮಸ್ಯೆ ಅನುಭವಿಸುವಂತಾಗಿದೆ. ಅದೇ ತೆರನಾಗಿ ಬಳ್ಳಾರಿ ಜಿಲ್ಲೆಯ ಕೆಲವು ಭಾಗದಲ್ಲಿ ಈ ಸಮಸ್ಯೆ ಅಲ್ಲಲ್ಲಿ ಕಂಡುಬರುತ್ತಾ ಸಮಸ್ಯೆ ಬಿಗಡಾಯಿಸುವತ್ತ ಸಾಗಿದೆ. ಇದನ್ನು ಮನಗೊಂಡು ನೀರು ಪೋಲು ಮಾಡದಂತೆ ಸರ್ಕಾರದಿಂದ, ಗ್ರಾಮಾಡಳಿತಗಳಿಂದ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಸಮಸ್ಯೆ ಉಂಟಾಗಿದ್ದು, ಬಿಸಿಲಿನ ತಾಪಕ್ಕೆ ಕುಡಿವ ನೀರಿನ ಅವಶ್ಯಕತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯಲ್ಲಿ ನೀರು ಕುಡಿದುಬಂದು ಹೊರಗೆ ಬಂದು ಕೆಲವು ಹೊತ್ತಿನಲ್ಲಿಯೇ ನೀರಿನ ದಾಹ ಪ್ರಾರಂಭವಾಗುತ್ತಿದೆ. ಇದನ್ನು ಅರಿತು ಸಮೀಪದ ಮುದ್ದಟನೂರು ನವಗ್ರಾಮದ ಪುನಿತ್‍ರಾಜಕುಮಾರ್ ಅಭಿಮಾನಿಗಳ ಯುವಕರ ತಂಡವು ಬಸ್‍ನಿಲ್ದಾಣದ ಹತ್ತಿರ ದಾರಿಹೋಕರಿಗೆ, ಹೊಲಗಳಲ್ಲಿ ಕೆಲಸ ಮಾಡಿ ಹೋಗುವ ಬರುವವರಿಗೆ ನೀರಿನ ದಾಹ ತೀರಿಸಲೆಂದು ಇಂದು ಬೆಳಿಗ್ಗೆ ನೀರಿನ ಅರವಟಿಗೆಗೆ ಚಾಲನೆ ನೀಡಿದರು. ದಲಿತ ಮುಖಂಡ ಎಚ್.ಬಿಳಿಕಲ್ಲಪ್ಪ ಅರವಟಿಗೆ ಉದ್ಘಾಟಿಸಿದರು. ತಳವಾರ ಹನುಮೇಶ ಮಾತನಾಡಿ ಇನ್ನುಮುಂದೆ 02 ತಿಂಗಳು ನೀರಿನ ದಾಹ ನೀಗಿಸಲು ಈ ಅರವಟಿಗೆ ಆರಂಭಿಸಲಾಗಿದ್ದು, ಪ್ರಾಣಿಪಕ್ಷಿಗಳಿಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಶಾಲೆ ವಿದ್ಯಾರ್ಥಿಗಳಿಗೆ ಅಪ್ಪು ಜನ್ಮದಿನದ ಅಂಗವಾಗಿ ಸಿಹಿ ಹಂಚಲಾಯಿತು. ನ್ಯಾಯವಾದಿ ರಾಂಬಾಬು, ರಾಮಪ್ಪ, ಹನುಮೇಶ, ಮಾರೇಶ, ಶೇಖರ, ಬಸವರಾಜ, ದೇವೆಂದ್ರ, ವೆಂಕಟೇಶಪ್ಪ, ದುರುಗಣ್ಣ, ಇತರರು ಹಾಜರಿದ್ದರು.
One attachment • Scanned by Gmail