ವೇದಿಕೆಯಲ್ಲೇ ಶಾಸಕ ಬೆಲ್ದಾಳೆಆರೋಗ್ಯ ವಿಚಾರಿಸಿದ ನಮೋ
ಬೀದರ:ಮಾ.17:ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಶನಿವಾರ ಜರುಗಿದ ಬೃಹತ್ ಸಾರ್ವಜನಿಕ ಸಭೆ ವೇದಿಕೆಯಲ್ಲೇ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಅವರ ಆರೋಗ್ಯ ವಿಚಾರಿಸಿರುವುದು ಸಭಿಕರ ಗಮನ ಸೆಳೆಯಿತು. ಕಳೆದ ವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಕಣ್ಣಿನ ಶಸ್ತ್ರಚಿಕಿತ್ಸೆ (ಸರ್ಜರಿ) ಮಾಡಿಸಿಕೊಂಡಿದ್ದಾರೆ. ಹೀಗಾಗಿ ವೇದಿಕೆ ಮೇಲಿದ್ದ ಡಾ.ಬೆಲ್ದಾಳೆ ಅವರು ಕಪ್ಪು ಕನ್ನಡಕ ಧರಿಸಿದ್ದರು. ತಮ್ಮ ಭಾಷಣ ಮುಗಿಸಿಕೊಂಡು ಮೋದಿ ಅವರು ನಿರ್ಗಮಿಸುವಾಗ ಪ್ರಮುಖರೆಲ್ಲರೂ ಕೈಜೋಡಿಸಿ ಬೀಳ್ಕೋಡುತ್ತಿದ್ದರು. ಈ ವೇಳೆ ಬೆಲ್ದಾಳೆ ಅವರು ಮೋದಿ ಅವರಿಗೆ ನಮಸ್ಕರಿಸಿದರು. ಕಪ್ಪು ಕನ್ನಡಕ ತೊಟ್ಟಿದ ಕಾರಣ ಕಣ್ಣಿನ ಸರ್ಜರಿ ಮಾಡಿಸಿಕೊಂಡ ವಿಷಯ ತಿಳಿಸಿದರು. ಆಗ ಮೋದಿ ಅವರು ಬೆಲ್ದಾಳೆ ಅವರಿಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಕಣ್ಣಿನ ಬಗ್ಗೆ ಸದಾ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದರು. ಪ್ರಧಾನಿ ಮೋದಿ ಅವರ ಈ ಕಾಳಜಿ ಡಾ.ಬೆಲ್ದಾಳೆ ಅವರಿಗೆ ಪುಳುಕಿತಗೊಳಿಸಿದರೆ, ಜತೆಗಿದ್ದ ಎಲ್ಲ ನಾಯಕರಿಗೆ ಮೋದಿ ಅವರ ಮುತುವರ್ಜಿ, ಸರಳತೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಬಗೆಗಿನ ಗೌರವಾದರ ಹುಬ್ಬೇರಿಸುವಂತೆ ಮಾಡಿತು. ಮೋದಿ ಅವರು ವೇದಿಕೆ ಮೇಲೆ ನನ್ನ ಆರೋಗ್ಯವನ್ನು ವಿಚಾರಿಸಿ, ಚೆನ್ನಾಗಿರುವಂತೆ ಸಲಹೆ ನೀಡಿ ಆಶೀರ್ವಾದ ಮಾಡಿದ್ದಾರೆ. ಅನಿರೀಕ್ಷಿತವಾಗಿ ನಡೆದಂಥ ಈ ಬೆಳವಣಿಗೆ ನನ್ನ ಜೀವನದಲ್ಲಿ ಅವಿಸ್ಮರಣೀಯ ಆಗಿರಲಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.