ನೀತಿ ಸಂಹಿತೆ ಪಾಲನೆಗೆ ಚುನಾವಣಾಧಿಕಾರಿ ಸೂಚನೆ
ಬೆಂಗಳೂರು, ಮಾ.೧೭-ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಭೆ ನಡೆಸಿ, ಮಾದರಿ ನೀತಿ ಸಂಹಿತೆ ಪಾಲನೆ ಮಾಡುವಂತೆ ಸೂಚಿಸಿದರು.
ನಗರದಲ್ಲಿಂದು ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಎಸ್ಪಿ ಪಕ್ಷದ ನಾಯಕ ಆರ್.ಮುನಿಯಪ್ಪ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್,ಆಪ್ ಸೇರಿದಂತೆ ವಿವಿಧ ಪಕ್ಷದ ನಾಯಕರು ಭಾಗಿಯಾಗಿದ್ದರು.
ಲೋಕಸಭಾ ಚುನಾವಣೆ ಘೋಷಣೆಯಾದ ಎಲ್ಲೆಡೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಧಿಕಾರಿಗಳು ಸರ್ಕಾರದ ನಿಗದಿತ ಕಾರ್ಯಕ್ರಮಗಳನ್ನು ಮುಂದುವರಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಜನಪ್ರತಿನಿಧಿಗಳು ಸರ್ಕಾರದ ಸಭೆ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಪಪಡಿಸಿದರು.
ಸರ್ಕಾರಿ ವಾಹನಗಳ ಬಳಕೆ, ಖಾಸಗಿ ಕಾರ್ಯಕ್ರಮಗಳಲ್ಲಿ ಮತಯಾಚನೆಗೆ ನಿರ್ಬಂಧ ಇರಲಿದೆ. ಮುಖ್ಯವಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜಕಾರಣಿಗಳು ಯಾವುದೇ ಕಾರ್ಯಕ್ರಮ ನಡೆಸಿದರೂ ಅದರ ಖರ್ಚಿನ ಬಾಬ್ತುಅನ್ನು ಆಯಾ ಪಕ್ಷ ಅಥವಾ ಅಭ್ಯರ್ಥಿಯ ಚುನಾವಣ ವೆಚ್ಚಕ್ಕೆ ಸೇರಿಕೊಳ್ಳಲಿದೆ.
ಚುನಾವಣಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯನ್ನು ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಮೀರುವಂತಿಲ್ಲ. ಪ್ರತಿಯೊಂದರ ಲೆಕ್ಕವನ್ನೂ ಕಾಲ-ಕಾಲಕ್ಕೆ ಒಪ್ಪಿಸಲೇಬೇಕು ಎಂದು ಹೇಳಿದರು.
ಸರ್ಕಾರಿ ಕಟ್ಟಡ, ದೇವಸ್ಥಾನ, ಚರ್ಚ್, ಮಸೀದಿ ಸಹಿತ ಧಾರ್ಮಿಕ ಕ್ಷೇತ್ರಗಳನ್ನು ಮತಪ್ರಚಾರಕ್ಕೆ ಬಳಸುವಂತಿಲ್ಲ.
ಜನಪ್ರತಿನಿಧಿಗಳು ಮತದಾರರಿಗೆ ಯಾವುದೇ ರೀತಿಯ ಆಸೆ-ಆಮಿಷ ಒಡ್ಡುವಂತಿಲ್ಲ. ಹಣಬಲ, ತೋಳ್ಬಲ ಅಥವಾ ಇನ್ಯಾವುದೇ ಬಲಗಳನ್ನೂ ಪ್ರದರ್ಶಿಸುವಂತಿಲ್ಲ.ಮತದಾರರನ್ನು ಸೆಳೆಯಲು ಯಾವುದೇ ಉಡುಗೊರೆಗಳನ್ನೂ ಕೊಡುವಂತಿಲ್ಲ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಹಾಗೂ ಕೂರ್ಮ ರಾವ್ ಉಪಸ್ಥಿತರಿದ್ದರು.