ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ, ನೀತಿ ಸಂಹಿತೆ  ಜಾರಿ; ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ.೧೭; ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ನಂ.13 ರ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದ ಎರಡನೇ ಹಂತದಲ್ಲಿ ನಡೆಯಲಿದ್ದು ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಮಾತನಾಡಿದರು. ಲೋಕಸಭಾ ಚುನಾವಣೆಯು ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ದೇಶದ ಎರಡನೇ ಹಾಗೂ ಮೂರನೇ ಹಂತದಲ್ಲಿ ಇಲ್ಲಿನ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿ ನಡೆಯುವ ಹಂತದನ್ವಯ ಎರಡನೇ ಹಂತದಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ನಡೆಯಲಿದೆ.ಏಪ್ರಿಲ್ 12 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ಏ.19 ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ.22 ಕೊನೆಯ ದಿನವಾಗಿರುತ್ತದೆ. ಮತದಾನವು ಮೇ 7 ರಂದು ನಡೆಯಲಿದೆ. ಮತ ಎಣಿಕೆಯು ಜೂನ್ 4 ರಂದು ದಾವಣಗೆರೆ ವಿ.ವಿ. ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಭಾಂಗಣವನ್ನು ಚುನಾವಣಾಧಿಕಾರಿಗಳ ಕಚೇರಿಯನ್ನಾಗಿ ಮಾಡಲಾಗಿದ್ದು ಇಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ ರೂ.25 ಸಾವಿರ ಹಾಗೂ ಪ.ಜಾ, ಪ.ಪಂಗಡ ಅಭ್ಯರ್ಥಿಯಾಗಿದ್ದಲ್ಲಿ ರೂ.12500 ಠೇವಣಿ ಸಲ್ಲಿಸಬೇಕು, ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ ರೂ.95 ಲಕ್ಷ ಮಿತಿ ಇದೆ.ಮತಗಟ್ಟೆಗಳ ವಿವರ; ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1946 ಮತಗಟ್ಟೆಗಳು ಬರುತ್ತವೆ. ಇದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1693 ಮತಗಟ್ಟೆಗಳಿವೆ.
ಮತದಾರರು; ಕ್ಷೇತ್ರವ್ಯಾಪ್ತಿಯಲ್ಲಿ ಹರಪನಹಳ್ಳಿ ಸೇರಿದಂತೆ ಪುರುಷ 838705, ಮಹಿಳಾ 840340, ಇತರೆ 136 ಹಾಗೂ 565 ಸೇವಾ ಮತದಾರರು ಸೇರಿ 16,79,746 ಮತದಾರರಿದ್ದಾರೆ. ವಿಧಾನಸಭಾ ಚುನಾವಣಾ ನಂತರ 2024 ರ ಜನವರಿ 1 ಕ್ಕೆ 18 ವರ್ಷ ತುಂಬುವವ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು 19507 ಪುರುಷ, 17339 ಮಹಿಳಾ, 3 ಇತರೆ ಸೇರಿ 36849 ಹೊಸ ಯುವ ಮತದಾರರು ಪಟ್ಟಿಯಲ್ಲಿ ನೊಂದಾಯಿಸಿದ್ದಾರೆ. ಏಪ್ರಿಲ್ 9 ರ ವರೆಗೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇದ್ದು ಆನ್‍ಲೈನ್ ಮೂಲಕ, ಅಥವಾ ಬಿ.ಎಲ್.ಓ ಮೂಲಕ ನೊಂದಾಯಿಸಿ ಯುವ ಮತದಾರರಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ ಎಂದರು.