ಏಡ್ಸ್ ಮುಕ್ತ ಭಾರತಕ್ಕೆ ಕರೆ
ವಿಜಯಪುರ.ಮಾ೧೭: ನಿರಂತರವಾಗಿ ತಪಾಸಣೆ ಹಾಗೂ ಅವಶ್ಯಕ ಚಿಕಿತ್ಸೆಗಳನ್ನು ನೀಡುವ ಮೂಲಕ ಭಾರತ ದೇಶವನ್ನು ೨೦೩೦ ರ ಒಳಗಾಗಿ ಏಡ್ಸ್ ಮುಕ್ತ ದೇಶವನ್ನಾಗಿಸಬೇಕಾಗಿದೆ ಎಂದು ಐಸಿಟಿಸಿ ಕೇಂದ್ರದ ಆಪ್ತಸಮಾಲೋಚಕಿಯರಾದ ಕಲಾವತಿ ತಿಳಿಸಿದರು.
ಅವರು ಇಲ್ಲಿನ ಪುರಸಭಾ ಕಾರ್ಯಾಲಯದ ಮುಂಭಾಗ ಶಾಂತಿ ಸಾಗರ್ ಹೋಟೆಲ್ ಬಳಿ ಸಾರ್ವಜನಿಕರಿಗಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಏಡ್ಸ್ ನಿಯಂತ್ರಣ ತಡೆಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ವರದಿಗಾರರನ್ನುದ್ದೇಷಿಸಿ ಮಾತನಾಡುತ್ತಿದ್ದರು.
ಸಮುದಾಯ ಆಧಾರಿತ ಸ್ಕ್ರೀನಿಂಗ್ ಮಾಡುವ ಮೂಲಕ ಆರಂಭಿಕ ರೋಗ ನಿರ್ಣಯವನ್ನು ಕಂಡುಹಿಡಿಯಲು ಹಾಗೂ ಸುಧಾರಿಸಲು ಮೊದಲ ಬಾರಿಗೆ ಪರೀಕ್ಷೆ ಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು, ವೈದ್ಯಕೀಯ ಸೇವೆಗಳು ವಿರಳವಾಗಿ ಬಳಸುವ ಜನರನ್ನು ತಲುಪಲು ಒಂದು ಪ್ರಮುಖ ವಿಧಾನವಾಗಿದೆ ಎಂದು ತಿಳಿಸಿದರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಾಂತರ ಜನರು ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆಂದು ಶುಕ್ರವಾರದಂದು ಬರುವ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ತಪಾಸಣೆಯನ್ನು ಸರಕಾರಿ ಆಸ್ವತ್ರೆಯಿಂದ ಉಚಿತವಾಗಿ ಮಾಡಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮತ್ತೊಬ್ಬ ಐಸಿಟಿಸಿ ಆಪ್ತಸಮಾಲೋಚಿಕಿ ಸುಮಾರವರು ಮಾತನಾಡುತ್ತಾ, ಈ ತಪಾಸಣೆಗಳಿಂದ ಅಪಾಯದಲ್ಲಿರುವ ಹೆಚ್‌ಐವಿ ರೋಗ ತಡೆಗಟ್ಟಲು ಹಾಗೂ ಅವಶ್ಯಕತೆ ಇರುವವರಿಗೆ ಆರೈಕೆ ಮತ್ತು ಸೇವೆಗಳನ್ನು ನೀಡಲು ಸಮುದಾಯ ಆಧಾರಿತ ಉಚಿತ ಎಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಗಳನ್ನು ಮಾಡುವುದಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಇಂತಹ ಶಿಬಿರಗಳನ್ನು ಜಾತ್ರೆ ಸಂತೆ ಜನನಿ ಬಿಡ ಸ್ಥಳಗಳಲ್ಲಿ ಏರ್ಪಡಿ ಸುತ್ತಲಿರುವುದಾಗಿ ಪ್ರತಿಯೊಬ್ಬರೂ ಈ ತಪಾಸಣೆಗೆ ಒಳಗಾಗಬೇಕೆಂದು ಈ ಪರೀಕ್ಷೆಯಲ್ಲಿ ಎಚ್‌ಐವಿ ಸೋಂಕಿಲ್ಲ ಎಂದು ತಿಳಿದುಕೊಂಡ ಜನರು ಲೈಂಗಿಕತೆ, ಮಾದಕ ವಸ್ತು ಬಳಕೆ, ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮುಂಜಾಗ್ರತೆ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಇದರಿಂದ ಹೆಚ್‌ಐವಿ ತಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ನೇತ್ರ ವೈದ್ಯೆ ವೀಣಾ ಮಾತನಾಡಿ, ಪ್ರತಿಯೊಬ್ಬರು ಸಕಾಲದಲ್ಲಿ ಹಿತಮಿತ ಆಹಾರಸೇವನೆ-ನಿದ್ದೆ-ದೈನಂದಿನ ವ್ಯವಹಾರ ಕಣ್ಣಿನ ರೋಗಗಳನ್ನೂ ದೂರವಿಡುತ್ತದೆ. ಅಂದರೆ ಹಗಲು ದುಡಿಮೆ, ರಾತ್ರಿ ನಿದ್ರೆ. ತಡರಾತ್ರಿಯೂ ಕೃತಕ ಬೆಳಕಿನಲ್ಲಿ ಎಚ್ಚರವಿರುವ, ಟಿ.ವಿ., ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಕಣ್ಣಿಗೆ ಹಾನಿಕರ. ಪ್ರಖರ ಬೆಳಕನ್ನು ಸೂರ್ಯರಶ್ಮಿಯನ್ನು ನೇರವಾಗಿ ದಿಟ್ಟಿಸುವ ಪ್ರಯತ್ನ ಮಾಡಬಾರದು. ಸಾಕಷ್ಟು ಬೆಳಕಿನಲ್ಲಿಯೇ ಓದುವ ಅಭ್ಯಾಸ, ಕಣ್ಣಿಗೆ ಹಿತವೆನಿಸುವ ನೋಟ, ಕಣ್ಣಿಗೆ ಸಾಕಷ್ಟು ವಿರಾಮ ದೃಷ್ಟಿಯ ರಕ್ಷಕ ಎಂದರು.
ಆರೋಗ್ಯ ಸಹಾಯಕ ವೀರೇಶ್ ಮಾತನಾಡಿ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಕೊಳ್ಳುವುದರಿಂದ, ಹಲವಾರು ಮಾನಸಿಕ ಅಸರ್‍ಪಕತೆಗಳಿಂದ ಉತ್ತೇಜಿಸಲ್ಪಟ್ಟ ಒತ್ತಡದಿಂದಾಗಿ ವಿವಿಧ ವ್ಯಸನಗಳಿಗೆ ತುತ್ತಾಗುವಂತಹ ಸಮಸ್ಯೆಗಳನ್ನು ತಡೆಯಬಹುದು ಅಥವಾ ಈ ವ್ಯಸನಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅವುಗಳನ್ನು ನಿಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ೧೧೦ ಕ್ಕೂ ಹೆಚ್ಚು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಹಾಯಕ ಸಿಬ್ಬಂದಿಗಳಾದ ಕಲಾವತಿ ಮತ್ತಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.