ನಂಜನಗೂಡು ಮಠದಲ್ಲಿ ಗುರುಸಾರ್ವಭೌಮರವಿಜೃಂಭಣೆಯ 429ನೇ ವರ್ಧಂತಿ ಉತ್ಸವ
ಸಂಜೆವಾಣಿ ವಾರ್ತೆ,
ವಿಜಯಪುರ,17:ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 429 ನೇ ವರ್ಧಂತಿ ಉತ್ಸವವನ್ನು ಅತ್ಯಂತ ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.
ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಶ್ರೀಮಠದಲ್ಲಿ ಐದು ದಿನಗಳ ಕಾಲ ಮಂತ್ರಾಲಯದ ಪಂಡಿತ ಡಾ ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ನಡೆದ ಜ್ಞಾನಸತ್ರ ಕಾರ್ಯಕ್ರಮದ ಮಂಗಳ ಜರುಗಿತು. ಪಂಡಿತರ ಅಗಾಧ ಪಾಂಡಿತ್ಯಪೂರ್ಣ ಪ್ರವಚನ ಅಲ್ಲದೇ ಸುಶ್ರಾವ್ಯ ಕೊಳಲು ವಾದನದಲ್ಲಿ ಕೇಳಿ ಬಂದ ಭಕ್ತಿ ಗೀತೆಗಳು ಭಕ್ತರ ಮನ ಸೂರೆಗೊಂಡವು.
ಸುಮಾರು ಒಂದು ಗಂಟೆ ಕಾಲ ಭಜನಾ ಮಂಡಳಿ ಸದಸ್ಯೆಯರು ನಡೆಸಿಕೊಟ್ಟ ಸುಶ್ರಾವ್ಯ ಸಂಗೀತ ಸೇವೆ ಭಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು.
ನಂತರ ರಥೋತ್ಸವ ಬಳಿಕ ಕನಕಸೇವೆ ನಡೆದವು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿ ಸುತ್ತಿತ್ತು. ಶ್ರೀಮಠವನ್ನು ತಳಿರು ತೋರಣ, ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.
ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ಯತಿರಾಯರ ವೃಂದಾವನಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು. ದೇವರ ಹಿಪ್ಪರಗಿಯ ಭಕ್ತವೃಂದದ ವಿಶೇಷ ಸೇವೆಯು ಭಕ್ತಜನರ ಪ್ರೀತಿಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ವಾಮನರಾವ ದೇಶಪಾಂಡೆ, ಗುರುರಾಜ ಕುಲಕರ್ಣಿ (ದೇವರಹಿಪ್ಪರಗಿ), ಕೃಷ್ಣ ಬೀಡಕರ, ವಾರಕರ, ವಿಜಯೀಂದ್ರ ಜೋಶಿ, ಶ್ರೀಕೃಷ್ಣ ಪಡಗಾನೂರ, ಗುರುರಾಜ ಸೊಂಡೂರ, ರಾಘಣ್ಣ ಜೋಶಿ, ಶ್ರೀಧರ ಹರಿದಾಸ, ಬಂಡಾಚಾರ್ಯ ಜೋಶಿ, ಶ್ರೀಧರ ಜೋಶಿ (ಮುತ್ತಗಿ), ಭೀಮಣ್ಣ ಕುಲಕರ್ಣಿ, ಪಿ.ಬಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.