ಜಾತಿ ವ್ಯವಸ್ಥೆ ಅಭಿವೃದ್ಧಿಗೆ ಮಾರಕ
ಬಂಗಾರಪೇಟೆ.ಮಾ೧೭:ಮಾನವೀಯ ಮೌಲ್ಯಗಳ ಕುಸಿತದಿಂದ ಜಾತಿ ವ್ಯವಸ್ಥೆ ಪರಾಕಷ್ಟೇ ದೇಶದಲ್ಲಿ ತಂಡವಾಡುತ್ತಿದ್ದು ಇಡೀ ನಾಗರಿಕ ಸಮಾಜ ಆತಂಕದ ಛಾಯೆಯಲ್ಲಿ ಮುಳುಗುವಂತಾಗಿದೆ, ಜಾತಿ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆಯ ವಿಚಾರಗೋಷ್ಠಿ ಕಾರ್ಯಕ್ರಮ ಪೂರಕವಾಗಿದೆ, ಎಂದು ತಹಶೀಲ್ದಾರ್ ರಶ್ಮಿ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿ-ಕರ್ನಾಟಕ ಸಹಯೋಗದಲ್ಲಿ ಮತ್ತು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮತ್ತು ಕಲಾವಿದ ಯಲ್ಲಪ್ಪ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ ಅನುಷ್ಠಾನ ಕುರಿತು ವಿಚಾರಗೋಷ್ಠಿ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರಯ ಪೂರ್ವ ಮತ್ತು ಸ್ವಾತಂತ್ರೋತ್ತರ ನಂತರ ದೇಶದ ಇತಿಹಾಸವನ್ನು ಅವಲೋಕಿಸಿದರೆ ಅಲ್ಪ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲೆ ದೌರ್ಜನ್ಯಗಳು ಕಡಿಮೆಯಾಗಿದ್ದರೂ ಸಹ ಕೆಲವು ಪ್ರದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾತೋಲನದಿಂದ ಜಾತಿ ವ್ಯವಸ್ಥೆ ರುದ್ರ ನರ್ತನ ಮಾಡುತ್ತಿರುವುದು ಆತಂಕವನ್ನು ಉಂಟು ಮಾಡುತ್ತಿದೆ.
ಕಾಯ್ದೆಯಲ್ಲಿರುವಂತಹ ಶಿಕ್ಷೆಯ ಮೂಲಕ ಪರಿವರ್ತನೆ ಸಾಧ್ಯವಿಲ್ಲ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮ ವಿಮರ್ಶೆಯ ಮೂಲಕ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಸಂವಿಧಾನದ ಆಶಯವಾದ ಸಮಾನತೆ ಭ್ರಾತೃತ್ವದ ತಲಹದಿಯಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯ ತಡೆಯಬಹುದು ಎಂದರು.
ನಂತರ ಮಾತನಾಡಿದ ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು ಜೀವಿಸಲಿಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ವಿಫಲವಾದಾಗ ಮತ್ತು ಸವರ್ಣೀಯರಿಂದ ತುಳಿತಕ್ಕೆ ಒಳಪಟ್ಟಾಗ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ೧೯೮೯ರಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ ಜಾರಿಗೆ ತರಲಾಯಿತು. ವಿಪರ್ಯಾಸ ಇದನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಸ್ಪೃಶ್ಯ ಸಮಾಜ ದೌರ್ಜನ್ಯಗಳ ಸುಳಿಯಲ್ಲಿ ಸಿಲುಕಿ ನಲುಗಿಹೋಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಟ್ರಾಸಿಟಿ ಕಾಯ್ದೆಯ ಅರಿವಿನ ಕೊರತೆಯಿಂದ ದುರುಪಯೋಗ:
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಸ್ಪೃಶ್ಯ ಸಮಾಜವನ್ನು ದಿಕ್ಕು ತಪ್ಪಿಸಿ ಹುಸಿ ಅಟ್ರಾಸಿಟಿ ದೂರು ದಾಖಲಿಸುವುದರಿಂದ ಅನೇಕ ಸೌಲಭ್ಯಗಳು ಸಿಗುತ್ತದೆ ಎಂದು ಅಮೀಷಗಳನ್ನು ನೀಡುತ್ತಾರೆ. ಇದರಿಂದ ಈ ಕಾಯ್ದೆಗಳು ದುರುಪಯೋಗವಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಪಿಡಿಒ ಸರಸ್ವತಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಸೂಲಿಕುಂಟೆ ರಮೇಶ್, ಸಿ.ಜೆ.ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು, ನೇತ್ರಾವತಿ ಶಂಕರ್, ಜಿ.ನಾರಾಯಣಪ್ಪ, ಮುನಿಸ್ವಾಮಿ, ಚೌಡಪ್ಪ, ಶಂಕರ ನಾರಾಯಣಗೌಡ, ಸಾವಿತ್ರಮ್ಮ, ಅಂಬರೀಷ್, ರಾಜ್‌ಕುಮಾರ್, ನಾಗರತ್ನಮ್ಮ, ಕಲಾವಿದ ಯಲ್ಲಪ್ಪ, ಗುಲ್ಲಹಳ್ಳಿ ಬಸಪ್ಪ, ಕಲಾವಿದ ಮುನಿಸ್ವಾಮಿ, ಮಾರುತಿ ಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಇತರರು ಉಪಸ್ಥಿತ್ತರಿದ್ದರು.