ದಾವಣಗೆರೆ ಸದ್ಭಕ್ತರ ಸಹಕಾರದಿಂದ ಈ ಪುಣ್ಯಾಶ್ರಮ ಸಾಕಷ್ಟು ಅಭಿವೃದ್ಧಿ ಕಂಡಿದೆ : ಓಂಕಾರ ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ. ೧೮; ಹಾನಗಲ್ ಕುಮಾರೇಶನ ಕೃಪಾಶೀರ್ವಾದದಿಂದ ಶ್ರೀ ಪಂಚಾಕ್ಷರಿ ಗವಾಯಿಗಳು ಈ ನಾಡಿನಾದ್ಯಂತ ಸಂಗೀತ ಪ್ರಚಾರ ಮಾಡಿದರು. ಈ ಪ್ರಚಾರ ಕಾರ್ಯವನ್ನು ಗುರುಗಳ ಕೀರ್ತಿಯನ್ನು ಹೆಚ್ಚೆಚ್ಚು ಸಂಗೀತ ಕಾರ್ಯಕ್ರಮಗಳ ಮೂಲಕ ಪುಟ್ಟರಾಜ ಕವಿ ಗವಾಯಿಗಳು ಪ್ರಚಾರ ಮಾಡಿದರು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಹೊರವಲಯದಲ್ಲಿರುವ ಬಾಡಾಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ನಡೆದ ಶ್ರೀ ಪಂಚಾಕ್ಷರಿ ಗವಾಯಿಗಳ 80ನೇ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯ ಸ್ಮರಣೋತ್ಸವ, ಧರ್ಮಸಭೆಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.2000 ಇಸವಿಯಿಂದ ಈ ಸ್ಥಳದಲ್ಲಿ ಪುಣ್ಯಾಶ್ರಮ ಆರಂಭವಾಗಿದ್ದು, ಅಂದಿನಿAದಲೂ ಇಂದಿನವರೆಗೆ ನಾವು ಸಾನಿಧ್ಯವಹಿಸಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದೇವೆ. ಅಂದಿನಿAದ ಈ ಮೂರು ತ್ರಿಮೂರ್ತಿಗಳ ಕೃಪಾಶೀರ್ವಾದದಿಂದ ದಾವಣಗೆರೆ ಸದ್ಭಕ್ತರ ದಾನದಿಂದ, ಸಹಕಾರದಿಂದ ಈ ಪುಣ್ಯಾಶ್ರಮ ಸಾಕಷ್ಟು ಅಭಿವೃದ್ಧಿ ಕಂಡಿದೆ. ಹೀಗೇ ಈ ಆಶ್ರಮ ಅಭಿವೃದ್ಧಿ ಹೊಂದಲಿ. ನಾಡಿನಾದ್ಯಂತ ಅಂಧ, ಅನಾಥರು ಈ ಆಶ್ರಮಕ್ಕೆ ಬಂದು ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಎಲ್ಲವನ್ನೂ ಕಲಿತು ಗುರುಗಳ ಕೀರ್ತಿಯನ್ನು ಇನ್ನೂ ಬೆಳಗಿಸುವಂತೆ ಕರೆ ನೀಡಿದರು.