ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ: ಸಿಎಂ ಭರವಸೆ
ಕಲಬುರಗಿ:ಸೆ.17: ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಗೌರವಧನದ ಬದಲು ಕನಿಷ್ಠ ವೇತನ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ನಗರದಲ್ಲಿ ಸಚಿವ ಸಂಪುಟ ಸಭೆ ಕೈಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿದ ನವ ಕರ್ನಾಟಕ ಎಂಆರ್‍ಡಬ್ಲ್ಯು/ವಿಆರ್‍ಡಬ್ಲ್ಯು/ಯುಆರ್‍ಡಬ್ಲ್ಯು ವಿಕಲಚೇತನರ ಗೌರವಧನ ಪುನರ್ವಸತಿ ಕಾರ್ಯಕರ್ತರ ಸಂಘದ ಮುಖಂಡರಿಗೆ ಸಿಎಂ ಈ ಭರವಸೆ ನೀಡಿದರು.
ಸೆ.14ರಿಂದ ಕಲಬುರಗಿ ನಗರದ ಟೌನ್‍ಹಾಲ್ ಸಮೀಪದ ಸಾರ್ವಜನಿಕ ಉದ್ಯಾನದ ಆವರಣದಲ್ಲಿ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹದಲ್ಲಿ ರಾಜ್ಯದ ಎಲ್ಲ 30 ಜಿಲ್ಲೆಗಳ ಸುಮಾರು 1500ಕ್ಕೂ ಅಧಿಕ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸೆ.16ರಂದು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸಚಿವದ್ವಯರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್, ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಅಂಬಾಜಿ ಪಿ.ಮೇಟಿ ಹಾಗೂ ರಾಜ್ಯಾಧ್ಯಕ್ಷ ಫಕೀರಗೌಡ ಪಾಟೀಲ್ ಸೇರಿದಂತೆ ಇತರ ಮುಖಂಡರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ವಿದ್ಯಮಾನದ ಬಳಿಕ ಸೆ.16ರಂದು ರಾತ್ರಿ 8 ಗಂಟೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಯಿತು. ಈ ವೇಳೆ, ಪುನರ್ವಸತಿ ಕಾರ್ಯಕರ್ತರೊಂದಿಗೆ ಸುಮಾರು 15 ನಿಮಿಷ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಆದಷ್ಟು ಬೇಗ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಏತನ್ಮಧ್ಯೆ, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸಂಘದ ಮುಖಂಡರಾದ ಅಂಬಾಜಿ ಮೇಟಿ, ಫಕೀರಗೌಡ ಪಾಟೀಲ್, ದತ್ತಾತ್ರೇಯ ಕುಡಕಿ, ವೆಂಕಟಪ್ಪ ಚವ್ಹಾಣ, ಕೆ.ಬಿ.ಹರೀಶ್ ಹಾಗೂ ಎಸ್.ಕೆ.ಘಾಟೆ ಅವರನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಸೆ.14ರಂದು ಬೆಳಗ್ಗೆ 10ರಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಕಲಬುರಗಿ, ಬೀದರ್, ಬಿಜಾಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ಹಾವೇರಿ, ಮಂಡ್ಯ, ಮೈಸೂರು, ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ವಿಕಲಚೇತನರ ಗೌರವಧನ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸೆ.16ರಂದು ರಾತ್ರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಮಧ್ಯಸ್ಥಿಕೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಯಶಸ್ವೀ ಮಾತುಕತೆ ನಡೆದ ಬಳಿಕ ಧರಣಿ ಸತ್ಯಾಗ್ರಹ ಅಂತ್ಯಗೊಳಿಸುವ ನಿರ್ಧಾರವನ್ನು ಸಂಘದ ಮುಖಂಡರು ಪ್ರಕಟಿಸಿದರು.