ನೂರು ವರ್ಷದ ಅಭಿವೃದ್ಧಿಯ ಗುರಿ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.17:- ಮುಂದಿನ ನೂರು ವರ್ಷಗಳ ದೂರದೃಷ್ಟಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸಬೇಕಿದ್ದು, ಮೈಸೂರನ್ನು ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೆಲಸ ಮಾಡಲಾಗುವುದು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ರಮಾವಿಲಾಸ ರಸ್ತೆಯಲ್ಲಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಪ್ರಮುಖರ ಮತ್ತು ಕಾರ್ಯಕರ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಧಾರಣೆಗಳಾಗಿವೆ. ಮೈಸೂರು ಮಹಾಸಂಸ್ಥಾನದ ಆಡಳಿತ ಇದ್ದಾಗ. ಹಲವಾರು ಯೋಜನೆಗಳನ್ನು ನೀಡಲಾಗಿದೆ. ಅದೇ ರೀತಿ ಮೋದಿ ಸರ್ಕಾರ ನೂರು ವರ್ಷಗಳ ದೂರದೃಷ್ಟಿ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸ್ವಚ್ಛ ಭಾರತ ಜತೆಗೆ ಶ್ರೇಷ್ಠ ಭಾರತವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಆದ್ಯಾತ್ಮಿಕ ಬದಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಮೈಸೂರಿನ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದರು. ಬಿಜೆಪಿ ಹೈಕಮಾಂಡ್ ಜನ ಸೇವೆ ಮಾಡಲು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಜೆಡಿಎಸ್ ನಾಯಕರು ತಮ್ಮೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಚುನಾವಣೆಯಲ್ಲಿ ಪ್ರಚಾರ ಮಾಡುವಾಗ ಎಲ್ಲರನ್ನು ಭೇಟಿ ಮಾಡುತ್ತೇನೆ. ಈಗಾಗಲೇ ಎಲ್ಲಾ ನಾಯಕರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವಾಗ ಯಾವುದೇ ರೀತಿಯ ಮನೋಭಾವ ಇರಬಾರದು ಎಂದು ಹೇಳಿದರು.
ಸಾಲ ಹೊರಿಸಿದ ಸಿದ್ದು: ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನಾವುಗಳು ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿ ಆಗಿರುವ ಕಾರಣ ಒಗ್ಗಟ್ಟು ಕಾಪಾಡಿಕೊಂಡು ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡಬೇಕು. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಬೆನ್ನಿಗೆ ಚೂರಿ ಹಾಕಿದ್ದರಿಂದ ಬಿಜೆಪಿಗೆ ಮತ ನೀಡಿದರು. ಮಂಡ್ಯದಲ್ಲಿ ಮಾಡಿದ ಕೆಲಸ ಮೈಸೂರು ಕ್ಷೇತ್ರದಲ್ಲಿ ನಡೆಯಲಿದೆ ಎನ್ನುವ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ದರೂ, ಪರಿಗಣಿಸದ ಕಾರಣ ಮತದಾನದ ದಿನದಂದು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿ ಮತಚಲಾವಣೆ ಮಾಡಿದರು ಎಂದು ಹೇಳಿದರು.
ಮೋದಿ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ಕೊಡುಗೆ ಕೊಟ್ಟವರಿಗೆ ಕೊಡುಗೆ ನೀಡಬೇಕೆಂಬ ಕಾರಣಕ್ಕಾಗಿ ಯದುವೀರರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಯದುವೀರ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹಾಕಲ್ಲವೆಂದು ಭಾವಿಸಿದ್ದೆವು. ಆದರೆ ಅಭ್ಯರ್ಥಿ ಹಾಕುತ್ತಿದ್ದಾರೆ. ನಾವು ಯದುವೀರ್ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 1 ಲಕ್ಷ ರೂಪಾಯಿ ಸಾಲದ ಹೊರೆ ಬರುವಂತೆ ಮಾಡಿದ್ದಾರೆ. ಆದರೆ, ತಮ್ಮ ಮನೆಯ ಬಂಗಾರ ಮಾರಾಟ ಮಾಡಿ ಡ್ಯಾಂ ಕಟ್ಟಿಸಿದವರು ರಾಜಮನೆತನದವರು. ಮತದಾರರು ಈ ವ್ಯತ್ಯಾಸ ಅರಿಯಬೇಕು ಎಂದು ಸಲಹೆ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ.
ಪ್ರತಾಪ್ ಸಿಂಹ ಕೂಡ ಕೆಲಸ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜತೆಗೆ ದಳಪತಿಗಳ ಆಶೀರ್ವಾದ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯದುವೀರ್ ಅವರನ್ನು ಗೆಲ್ಲಿಸಬೇಕಿದೆ. ರಾಜಮನೆತನದವರ ಕೊಡುಗೆ ಅಪಾರವಾಗಿದೆ. ಹೊಸ ತಲೆಮಾರಿನವರು ರಾಜಕಾರಣಕ್ಕೆ ಬಂದಿದ್ದಾರೆ. ನಾವು ರಾಜಮನೆತನದ ಅಭ್ಯರ್ಥಿ ಎನ್ನುವುದನ್ನು ನೋಡುವ ಜತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಮೋದಿಯವರನ್ನು ಪ್ರಧಾನಿ ಮಾಡಬೇಕಿದೆ ಎಂದು ಹೇಳಿದರು.
ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ, ನಗರಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಅನಂತು, ಜಿಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್ ಮತ್ತಿತರರು ಹಾಜರಿದ್ದರು.