ನಾಲಿಗೆಯ ಮೇಲೆ ಹಿಡಿತ ಇಲ್ಲದ ರಾಜಕಾರಣಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ : ಅಣ್ಣಾಸಾಬ ತೆಲಸಂಗ
ಅಥಣಿ :ಮಾ.16: ಪತ್ರಕರ್ತರ ಮತ್ತು ಮಾಧ್ಯಮಗಳ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ನಿಂದನೆ ಮಾಡಿ ಮಾತನಾಡಿದ್ದು ಖಂಡನೀಯ, ಲೋಕಸಭಾ ಸದಸ್ಯರಾಗಿರುವ ಹೆಗಡೆ ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ಹೀನಾಯವಾಗಿ ಮಾತನಾಡಿರುವುದನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು. ನಾಲಿಗೆಯ ಮೇಲೆ ಹಿಡಿತ ಇಲ್ಲದ ರಾಜಕಾರಣಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅವರು ಶುಕ್ರವಾರ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಯನ್ನ ಖಂಡಿಸಿ ಕಾ.ನಿ..ಪ ಸಂಘದಿಂದ ತಾಲೂಕ ತಹಸೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮದವರನ್ನು ಹೊಗಳುವುದು, ಬೇಡವಾದಾಗ ಹೀಯಾಳಿಸಿ ಮಾತನಾಡುವುದು ಕೆಲವು ರಾಜಕಾರಣಿಗಳ ಕೆಟ್ಟ ಚಾಳಿಯಾಗಿದೆ. ಸಂಸದ ಅನಂತಕುಮಾರ ಹೆಗಡೆ ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆನೆ ಹೋಗಿದ್ದೆ ದಾರಿ ಎಂಬಂತೆ ನಾವು ನಡೆಯಬೇಕು, ಪತ್ರಕರ್ತರು ಮಾಧ್ಯಮದವರು ಏನು ಬೇಕಾದರೂ ಬರೆದುಕೊಳ್ಳಲಿ, ಆನೆಗಳು ಹೋಗುವಾಗ ನಾಯಿಗಳು ಬೊಗಳುವುದು ಸಹಜ ಎಂದು ಮಾಧ್ಯಮದವರನ್ನು ನಾಯಿಗಳಿಗೆ ಹೋಲಿಸಿ ಮಾತನಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿಗಳು ಸಮಾಜ ಸೇವೆಗಾಗಿ ಶ್ರಮಿಸಬೇಕು. ಅಧಿಕಾರದ ದರ್ಪ ಮತ್ತು ಹಣದ ಮದದಿಂದ ಎಲುಬಿಲ್ಲದ ನಾಲಿಗೆಯನ್ನು ಮನಬಂದಂತೆ ಹರಿಬಿಡುತ್ತಿರುವ ಮತ್ತು ಆಗಾಗ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸಂಸದ ಅನಂತಕುಮಾರ ಹೆಗಡೆ ನಡೆ ಸರಿಯಲ್ಲ, ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ ಮಾತನಾಡಿ ಪತ್ರಕರ್ತರ ಬಗ್ಗೆ ನಿಂದನೆ ಮಾತುಗಳನ್ನಾಡಿದ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧ ಕೇಂದ್ರ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಬಸವರಾಜ ಚಮಕೇರಿ, ಚನ್ನಬಸಯ್ಯ ಇಟನಾಳಮಠ, ರಾಜು ಗಾಲಿ, ಶೇಖರ ತೆವರಟ್ಟಿ, ಶಿವಕುಮಾರ ಅಪರಾಜ, ವಿಜಯಕುಮಾರ ಅಡಹಳ್ಳಿ, ರಮೇಶ ಭಾದವಾಡಗಿ, ರಾಕೇಶ ಮೈಗೂರ, ಪ್ರಕಾಶ ಕಾಂಬಳೆ, ಕಲ್ಮೇಶ ಸತ್ತಿ, ಮಹಾಂತೇಶ ಕೆಂಚಣ್ಣವರ, ಸುಭಾಸ ಕಾಂಬಳೆ, ಮೋಹನ್ ಪಾಟ್ಟಣಕರ, ಶ್ರೀಶೈಲ ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.