ಆಯಾಜ್ ಖಾನ್ ಗೆ ಟಿಕೇಟ್ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಅಂತ್ಯ
ಬೀದರ್: ಮಾ.16:52 ವರ್ಷಗಳ ಹಿಂದೆ ಬೀದರ್ ನಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲಾಗಿತ್ತು. ಅದಾದ ಬಳಿಕ ಇಲ್ಲಿ ಮುಸಲ್ಮಾನ ಜನಸಂಖ್ಯೆ ಹೆಚ್ಚಿದ್ದರೂ ಟಿಕೇಟ್ ನೀಡಲಿಲ್ಲ. ಈ ಬಾರಿ ಎಲ್ಲ ಧರ್ಮ, ಜಾತಿ, ಜನಾಂಗದವರನ್ನು ಕೊಂಡೊಯ್ಯುವ ಸಾಮಥ್ರ್ಯ ಶಿಕ್ಷಣ ಪ್ರೇಮಿ ಡಾ.ಆಯಾಜ್ ಖಾನ್ ಅವರಲ್ಲಿದ್ದು ಈ ಬಾರಿಯ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಟಿಕೇಟ್ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಅಂತ್ಯಗೊಳ್ಳಲಿದೆ ಎಂದು ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ವಹೀದ್ ಲಖನ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಡಿ ಉದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಎಲ್ಲ ಧರ್ಮದವರನ್ನು ಕೊಂಡೊಯ್ಯುವ ಪಕ್ಷವಾಗಿದ್ದರೂ ಆಂತರಿಕ ಕಚ್ಚಾಟದಿಂದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದೆ. ಡಾ.ಆಯಾಜ್ ಖಾನ್ ಅವರು ಜ್ಯಾತ್ಯಾತೀತ ವ್ಯಕ್ತಿಯಾಗಿದ್ದು, ಎಲ್ಲರನ್ನು ಒಂದೆ ವೇದಿಕೆಯಲ್ಲಿ ಕೊಂಡೊಯ್ಯುವರು. ಅವರಿಗೆ ಸರ್ವ ಧರ್ಮಗಳ ಬೆಂಬಲವಿದ್ದು ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮಣೆ ಹಾಕಬೇಕಿದೆ ಎಂದರು.
ಬಿಜೆಪಿ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ, ಕಾನೂನು ಸುವ್ಯವಸ್ಥೆ ಬಿಗಡಾಯಿಸಿದೆ, ಧರ್ಮ-ಧರ್ಮಗಳ ಮಧ್ಯ, ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಆಯಾಜ್ ಖಾನ್ ಗೆ ಕಾಂಗ್ರೆಸ್ ಗೆ ಟಿಕೇಟ್ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದರು.
ವಿವಿಧ ಸಮಾಜದ ಮುಖಂಡರಾದ ರಾಜಕುಮಾರ ಗೂನ್ನಳ್ಳಿ, ಚಂದ್ರಕಾಂತ ನಿರೋಟೆ, ಜಯಸುದಾಸ ಅಣದುರೆ, ಜಯರಾಜ ದೊಡಮನಿ, ಸಂದೀಪ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಟಿಯಲ್ಲಿದ್ದರು.