ಭೀಮಾ ನದಿಗೆ 5 ಟಿಎಂಸಿ ನೀರು ಹರಿಸಲು ಅಮರಣಾಂತ ಉಪವಾಸ ಸತ್ಯಾಗ್ರಹ
ಅಫಜಲಪುರ:ಮಾ.16: ತಮಿಳುನಾಡಿಗೆ ಕಾವೇರಿ ನೀರು ಹರಿಸದಿದ್ದರೆ ಸುಪ್ರೀಂಕೋರ್ಟ್ ಮಾತನಾಡುತ್ತದೆ.
ಆದರೆ ನಮ್ಮಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭೀಮಾ ನದಿಗೆ ನೀರು ಹರಿಸದಿದ್ದರೂ ಯಾರು ಕೂಡ ಮಾತನಾಡದಿರುವುದು ವಿಷಾದದ ಸಂಗತಿ ಎಂದು ಪ್ರಗತಿಪರ ಹೋರಾಟಗಾರ ಶಿವಕುಮಾರ ನಾಟೀಕಾರ ತಮ್ಮ ಅಸಮಧಾನ ಹೊರಹಾಕಿದರು.
ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರದಿಂದ ಹಮ್ಮಿಕೊಂಡ ಅಮರಣಾಂತ ಉಪವಾಸ ಸತ್ಯಾಗ್ರಹದ ನೇತೃತ್ವವಹಿಸಿ ಮಾತನಾಡಿದ ಅವರು, ಭೀಮಾ ನದಿಯ ಮೇಲೆ ಅವಲಂಬನೆಯಾದ ರೈತರು ಪ್ರತಿ ವರ್ಷ 45 ಲಕ್ಷ ಟನ್ ಕಬ್ಬು ಬೆಳೆಯುತ್ತಾರೆ. ಕಲಬುರಗಿ ಜಿಲ್ಲೆಯಲ್ಲೇ ಅಫಜಲಪುರ ಒಂದೇ ತಾಲೂಕಿನಲ್ಲಿ ಸುಮಾರು 12 ಲಕ್ಷ ಟನ್ ಕಬ್ಬನ್ನು ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ. ಹೀಗಾಗಿ ಎಪ್ರಿಲ್, ಮೇ ಈ ತಿಂಗಳಲ್ಲೇ ಭಿಮಾ ನದಿಗೆ ನೀರು ಹರಿಸದಿದ್ದರೆ 400 ಕೋಟಿಗೂ ಅಧಿಕ ಹಾನಿ ಸಂಭವಿಸುತ್ತದೆ. ಇದರಿಂದ ಸಾಲ ಮಾಡಿರುವ ರೈತರು ಸಾಲ ತೀರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಗುಳೆ ಹೋಗುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಹಾರಾಷ್ಟ್ರದಿಂದ ಭೀಮಾನದಿಗೆ ಬರಬೇಕಿರುವ ನಮ್ಮ ಹಕ್ಕಿನ ನೀರನ್ನು ನಮಗೆ ಕೊಡಿಸುವ ಜವಾಬ್ದಾರಿ ಬಚಾವತ್ ಆಯೋಗದ ಮೇಲಿದ್ದು,1976ರಲ್ಲಿ ಆಯೋಗ ನೀಡಿದ ತೀರ್ಪಿ ನಂತೆ ಒಟ್ಟು 351 ಟಿಎಂಸಿ ನೀರಿನಲ್ಲಿ ಮಹಾರಾಷ್ಟ್ರ 300.6, ಕರ್ನಾಟಕ 45.3 ಮತ್ತು ಆಂದ್ರಪ್ರದೇಶ 5.1 ಟಿಎಂಸಿ ನೀರಿನ ಪಾಲು ಹೊಂದಿವೆ. ಆದರೆ, ನೀರಿನ ಬಳಕೆ ಪ್ರಮಾಣವನ್ನು ಮಹಾರಾಷ್ಟ್ರಕ್ಕೆ 95 ಟಿಎಂಸಿ ಕರ್ನಾಟಕಕ್ಕೆ 15 ಟಿಎಂಸಿ ಪ್ರಮಾಣದಲ್ಲಿ ಬಳಕೆ ಮಾಡಿಕೊಳಲು ಸೂಚಿಸಲಾಗಿತ್ತು. ಅದರಂತೆ ಆರಂಭದ ಕೆಲವು ವರ್ಷ ಮಹಾರಾಷ್ಟ್ರದ ಉಜನಿ ಆಣೆಕಟ್ಟಿನಿಂದ ನೀರನ್ನು ಬಳಕೆ ಮಾಡಿಕೊಳ್ಳಲು ಬಿಡಲಾಗುತ್ತಿತ್ತು. ಅಂದಿನ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಆ ನೀರನ್ನು ಬಳಕೆ ಮಾಡಿಕೊಳ್ಳಲು ಸೂಕ್ತ ಯೋಜನೆಗಳು ರೂಪುಗೊಳ್ಳದೆ ಇರುವುದರಿಂದ ನಮ್ಮ ಭಾಗದ ರೈತರ ಬದುಕು ದುಸ್ತರಗೊಳಿಸಿದೆ. 1998ರಿಂದ ಈಚೆಗೆ ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ. ಹಾಗಾಗಿ ನಮ್ಮ ಪಾಲಿನ ನೀರು ನಮಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ಮಹಾರಾಷ್ಟ್ರ ಸರಕಾರ ಕೇಂದ್ರ ಜಲಸಂಪನ್ಮೂಲ ಮಂಡಳಿಯ ಅನುಮತಿಯನ್ನು ಪಡೆಯದೆ ಉಜನಿ ಆಣೆಕಟ್ಟಿನ ಹಿನ್ನೀರಿನಲ್ಲಿ ಅಕ್ರಮವಾಗಿ ಸುಮಾರು 25 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಿರುವುದರಿಂದ 13.5 ಟಿಎಂಸಿ ನೀರು ಸೀನಾ ನದಿಗೆ ಸೇರ್ಪಡೆ ಆಗುತ್ತಿದೆ. ಉಜನಿ ಆಣೆಕಟ್ಟು 117.2 ನೀರಿನ ಸಾಮಥ್ರ್ಯ ಹೊಂದಿದ್ದು ಅದರಲ್ಲಿ 60.5 ಟಿಎಂಸಿ ನೀರು ಡೆಡ್ ಸ್ಟೋರೇಜ್ ನಲ್ಲಿದ್ದರೆ, 56.7 ಟಿಎಂಸಿ ನೀರು ಲೈವ್ ಸ್ಟೋರೇಜ್‍ನಲ್ಲಿದೆ. ಉಜಿನಿ ಅಣೆಕಟ್ಟನ್ನು ಕೇಂದ್ರ ಜಲ ಸಂಪನ್ಮೂಲ ಮಂಡಳಿ ಅನುಮತಿ ಇಲ್ಲದೆ 3 ಮೀಟರ್ ಎತ್ತರಿಸಿ 7 ಟಿಎಂಸಿ ನೀರನ್ನು ಅಧಿಕವಾಗಿ ಸಂಗ್ರಹಿಸಲು ಆರಂಭಿಸಿ ಈಗಾಗಲೇ 6-7 ವರ್ಷಗಳಾಗಿವೆ. ಇಷ್ಟೆಲ್ಲ ಅನ್ಯಾಯ ಮಹಾರಾಷ್ಟ್ರ ಸರ್ಕಾರ ಮಾಡುತ್ತಿದ್ದರೂ, ನಮ್ಮ ರಾಜ್ಯ ಸರ್ಕಾರ ಮಾತ್ರ ಸೌಜನ್ಯಕ್ಕೂ ನಮ್ಮ ಹಕ್ಕಿನ ನೀರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸುತ್ತಿಲ್ಲ. ಭೀಮಾ ನದಿ ಹರಿಯುವ ನಮ್ಮ ಭಾಗದ ಎಲ್ಲ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಕೂಡಲೇ ಉಜನಿ ಅಥವಾ ಆಲಮಟ್ಟಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆಯ ರೂಪರೇಷೆಗಳನ್ನು ಬದಲಾಯಿಸಿ ದೊಡ್ಡ ಮಟ್ಟದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹೋರಾಟಕ್ಕೆ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶ್ರೀಗಳು, ಮರುಳಾರಾಧ್ಯ ಶ್ರೀಗಳು,
ಚಂದ್ರಶೇಖರ ಶಿವಾಚಾರ್ಯರು, ಸಾರಂಗಬಸವ ಶಿವಾಚಾರ್ಯರು, ಶೀ ಪ್ರಭುಕುಮಾರ ಮಹಾ ಸ್ವಾಮೀಜಿಗಳು, ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಡಾ. ಸೋಮಶೇಖರ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಶಿವಾಚಾರ್ಯರು ಸೇರಿದಂತೆ ಅನೇಕ ಪೂಜ್ಯರು ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಮುಖಂಡರಾದ ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಸಿಂಗೆ, ಶರಣಗೌಡ ಪಾಟೀಲ್, ಸಿದ್ದಣಗೌಡ ಪಾಟೀಲ್, ರಾಜೇಂದ್ರ ಸರ್ದಾರ್, ಅಮೋಲ್ ಮೊರೆ, ಅಮರಸಿಂಗ್ ರಜಪೂತ್, ವಿಜಯ ವಡಗೇರಿ, ಮರೆಪ್ಪ ಜಮಾದಾರ, ಪ್ರಭು ಜಮಾದಾರ, ಶ್ರೀಕಾಂತ್ ದಿವಾಣಜಿ, ಯಲ್ಲಪ್ಪ ರಮಗಾ, ಶಿವರಾಯ ಪೂಜಾರಿ, ಶರಣು ಬಳೂರ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.