ಡಾ.ಪಾಟೀಲ ಪುಟ್ಟಪ್ಪನವರ ಕೊಡುಗೆ ಅನನ್ಯ
ಕಲಬುರಗಿ:ಮಾ.16: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ, ಕನ್ನಡ ಭಾಷೆ, ನುಡಿ-ಗಡಿ ಸಮಸ್ಯೆ ಬಂದಾಗಲೆಲ್ಲಾ ಮಂಚೂಣಿಯಲ್ಲಿ ನಿಂತು ಹೋರಾಟ ಮಾಡುವ ಮೂಲಕ ನ್ಯಾಯವನ್ನು ಒದಗಿಸಿಕೊಡುತ್ತಿದ್ದ ಕನ್ನಡದ ಕಟ್ಟಾಳು, ಕಾವಲುಗಾರ ಡಾ.ಪಾಟೀಲ ಪುಟ್ಟಪ್ಪನವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಶ್ರೇಯಸ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಡಾ.ಪಾಟೀಲ ಪುಟ್ಟಪ್ಪನವರ ಪುಣ್ಯಸ್ಮರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರಾಗಿ ನಾಡಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರ ದೊರಕಿಸಿಕೊಡಲು ಶ್ರಮಿಸಿದ್ದಾರೆ. ಗೋಕಾಕ ವರದಿಯ ಅನುಷ್ಠಾನಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು. ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಮಾರು ಕಳೆದ ಅನೇಕ ದಶಕಗಳಷ್ಟು ಸುಧೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇಡೀ ತಮ್ಮ ಜೀವನದುದ್ದಕ್ಕೂ ಹಣ, ಅಂತಸ್ತು, ಅಧಿಕಾರಕ್ಕೆ ಬೆನ್ನು ಹತ್ತಿದವರಲ್ಲ ಎಂದು ಅವರ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವತ್ತ ಮುಖ್ಯ ಶಿಕ್ಷಕ ಬಸಯ್ಯಸ್‍ವಮಿ ಹೊದಲೂರ ಸೇರಿದಂತೆ ಮತ್ತಿತರರಿದ್ದರು.