ಬೀದರ್ ಜಿಲ್ಲೆಯನ್ನು ಸಂಪೂರ್ಣ ಹಸಿರೀಕರಣಗೊಳಿಸುವ ಗುರಿ
ಭಾಲ್ಕಿ:ಮಾ.16: ಬೀದರ್ ಜಿಲ್ಲೆಯನ್ನು ಸಂಪೂರ್ಣ ಹಸಿರೀಕರಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಇಂಚೂರ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಬೀದರ್ ಮತ್ತು ಪ್ರಾದೇಶಿಕ ಅರಣ್ಯ ವಲಯ ಭಾಲ್ಕಿ ಸಹಯೋಗದಲ್ಲಿ ಗುರುವಾರ ವೃಕ್ಷೊದ್ಯಾನ(ಟ್ರೀ ಪಾರ್ಕ್) ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಿಡ ಮರಗಳು, ಅರಣ್ಯ ಸಂಪತ್ತು ಉಳಿದರೆ ಮಾತ್ರ ನಮ್ಮೆಲ್ಲರ ಉಳಿವು. ಆದರೆ ಇಂದಿನ ಆಧುನಿಕತೆ ಭರಾಟೆಯಲ್ಲಿ ಪರಿಸರ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು. ಪರಿಸರ ಸಂರಕ್ಷಣೆ ಅಗತ್ಯತೆ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಎಲ್ಲರೂ ಕೂಡ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದರ ಜತೆಗೆ ಅವುಗಳ ಸಂರಕ್ಷಣೆಗೆ ಮುಂದಾಗಬೇಕಿದೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು, ಗಿಡ ಮರಗಳು ಹೆಚ್ಚೆಚ್ಚು ನೆಡಲು ಯೋಜನೆ ಹಾಕಿ ಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿದೆ ಎಂದರು.
ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ 80 ಲಕ್ಷ ರೂ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಮಕ್ಕಳ ಆಟಿಕೆ, ವಾಯುವಿಹಾರ, ಹಿರಿಯ ನಾಗಕರಿಕರ ವಿಶ್ರಾಂತಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನಿಲ ಪನ್ನಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ಬೀದರ್ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಶಿವಕುಮಾರ ಗಾಜರೆ, ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ.ರಾಜೇಂದ್ರ, ಪ್ರಾದೇಶೀಕ ವಲಯದ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಮೋರೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ ಸೇರಿದಂತೆ ಹಲವರು ಇದ್ದರು.