ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು
ಸಂಜೆವಾಣಿ ವಾರ್ತೆ
ಹನೂರು ಮಾ 16 :- ಕಳೆದ ಹಲವಾರು ದಿನಗಳಿಂದ ತಾಲ್ಲೂಕಿನ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.ಹನೂರು ತಾಲ್ಲೂಕು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನ ಪಾಳ್ಯ ಗ್ರಾಮದಲ್ಲಿ ಈ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಚಿರತೆ ಇತ್ತೀಚೆಗೆ ಹಲವಾರು ಮೇಕೆಗಳು ಮತ್ತು ಕುರಿ ಮೇಲೆ ದಾಳಿ ನಡೆಸಿ ಅವುಗಳ ರಕ್ತ ಹೀರಿತ್ತು. ಇದರಿಂದ ಈ ಭಾಗದ ಜನರು ತೀವ್ರ ಆತಂಕದಲ್ಲಿದ್ದರು. ಶುಕ್ರವಾರ ರಾತ್ರಿ ಅಥವಾ ಶನಿವಾರ ಮುಂಜಾನೆ ಈ ಚಿರತೆ ಬೋನಿಗೆ ಬಿದ್ದಿರಬಹುದು ಎನ್ನಲಾಗಿದೆ.ಬೋನಿಗೆ ಬಿದ್ದಿರುವ ಈ ಚಿರತೆಯನ್ನು ನೋಡಲು ಜನರು ಧಾವಿಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಜನರನ್ನು ದೂರ ಕಳಿಸಲು ಹರ ಸಾಹಸ ಪಟ್ಟರು.
ಸೆರೆಯಾದ ಚಿರತೆಯನ್ನು ಜನವಸತಿ ಪ್ರದೇಶದಿಂದ ದೂರ ಇಡುವ ಕಾಡಿನಲ್ಲಿ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.