ಪ್ರಧಾನಿಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಕಲಬುರಗಿ:ಮಾ.15:ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಗೆ ಆಗಮಿಸಲಿದ್ದು‌ ಇಲ್ಲಿಂದಲೇ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಲಬುರಗಿಗೆ ಸ್ವಾಗತ ಕೋರಿರುವ ಗ್ರಾಮಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರ ಪರ ಕೆಲವೊಂದು ಪ್ರಮುಖ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸಿದ್ದಾರೆ.
ಮಿ.ಬಾಂಡ್ ಗೆ ಆತ್ಮೀಯ ಸ್ವಾಗತ ಎಂದು ತಮ್ಮ ‘ ಎಕ್ಸ್ ‘ (ಟ್ವಿಟರ್) ಖಾತೆಯಲ್ಲಿ ಬರೆಯುವ ಮೂಲಕ ಟಾಂಗ್ ನೀಡಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ.
1) ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ವೇತನ ಯಾಕೆ ಬಿಡುಗಡೆ ಮಾಡುತ್ತಿಲ್ಲ ? ಮೋದಿ ಸರ್ಕಾರ ದಿವಾಳಿಯಾಗಿದೆಯೆ?
2) ಕರ್ನಾಟಕ ತೀವ್ರ ಬರಗಾಲ ಎದುರಿಸುತ್ತಿದ್ದರೂ ಕೂಡಾ ಮೋದಿ ಸರ್ಕಾರ ಎನ್ ಡಿ ಆರ್ ಎಫ್ ಅಡಿಯಲ್ಲಿ ಯಾಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ?
3) ಕಳೆದ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿರುವಂತೆ, ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಯಾವಾಗ ಪರಿಶಿಷ್ಟ ಪಂಗಡ ( ಎಸ್ ಟಿ) ಗೆ ಸೇರಿಸುತ್ತೀರಿ ?
4) ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಮಂಜೂರಾಗಿದ್ದ ಕಲಬುರಗಿ ರೇಲ್ವೆ ವಲಯವನ್ನು ನಿಮ್ಮ ಸರ್ಕಾರ ಯಾಕೆ ಸ್ಥಾಪಿಸಲಿಲ್ಲ ?
5) ಕಲಬುರಗಿ ಗೆ ಬರಬೇಕಿದ್ದ ನಿಮ್ಝ್ ಯೋಜನೆಯನ್ನು ಯಾಕೆ ಸ್ಥಾಪಿಸಲಿಲ್ಲ ?
6) ಕಲಬುರಗಿ ಹೊರ ವರ್ತುಲ ರಸ್ತೆಗೆ ಯಾಕೆ ಅನುದಾನ ಬಿಡುಗಡೆ ಮಾಡಲಿಲ್ಲ ?
ಈ ಎಲ್ಲ ಪ್ರಶ್ನೆಗಳನ್ನು ಕೇಳುವುದರ ಜೊತೆಗೆ ಮೋದಿ ಮೋಸ ಎಂದು ಸಚಿವರು ಟ್ರೆಂಡ್ ಮಾಡಿದ್ದಾರೆ.