ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ : ತಹಸೀಲ್ದಾರ ಹಿರೇಮಠ
ಸಂಜೆವಾಣಿ ವಾರ್ತೆ
ಔರಾದ್ :ಮಾ.16: ‘ಅಪೌಷ್ಟಿಕ ಆಹಾರ ಸೇವನೆಯಿಂದ ಮಾನವ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ, ಅದಕ್ಕಾಗಿ ಎಲ್ಲರೂ ಪೌಷ್ಟಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಹಸಿಲ್ದಾರ್ ನಾಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ವಿಕಲಚೆತನ ನರೇಗಾ ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮಸ್ಥರಿಗೆ ಗ್ರಾಮ ಆರೋಗ್ಯ ಅಭಿಯಾನದ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಜೀವನ ಶೈಲಿಯ ಬದಲಾವಣೆಯಿಂದ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯವಾಗಿದೆ. ದುಶ್ಚಟಗಳಿಗೆ ದಾಸರಾಗದೆ ಉತ್ತಮ ಆಹಾರ ಸೇವನೆ ಮಾಡಬೇಕು ಆರೋಗ್ಯವಂತ ಜೀವನ ನಡೆಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಅವರು ಮಾತನಾಡಿ ನಮ್ಮ ದೇಶದಲ್ಲಿ ಬಡತನದ ಜೊತೆಗೆ ಅನಾರೋಗ್ಯ ಸಮಸ್ಯೆ ಕೂಡ ಬಹಳಷ್ಟಿತ್ತು. ಈಗ ಅದು ಗಣನೀಯವಾಗಿ ಕ್ಷೀಣಿಸುತ್ತಾ ಬರುತ್ತಿದೆ. ಆರೋಗ್ಯ ನಮ್ಮ ಕೈಯಲ್ಲಿದೆ, ಗರ್ಭಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಸುದೇಶ ಕುಮಾರ , ಸರ್ಕಾರ ಜನರಿಗಾಗಿ ವಲಸೆ ತಪ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಜೊತೆಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಗ್ರಾಮ ಆರೋಗ್ಯ ಅಭಿಯಾನ, ಆದ್ದರಿಂದ ಪ್ರತಿಯೊಬ್ಬರೂ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿಕೆ, ಗ್ರಾಪಂ. ಅಧ್ಯಕ್ಷ ಬಸಯ್ಯ ಸ್ವಾಮಿ, ಉಪಾಧ್ಯಕ್ಷೆ ಸುಜಾತಾ ಮಚ್ಚಿಂದ್ರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ ಮುಕ್ರಂಬೆ, ಸಮುದಾಯ ಆರೋಗ್ಯಾಧಿಕಾರಿ ಸಂಗೀತಾ, ಬಸವರಾಜ ಶೆಂಬೆಳ್ಳಿ, ಒಸಿನ್, ಅಮರನಾಥ ಮುಕ್ತೆದಾರ್, ಶಿವಕುಮಾರ ದೇಶಮುಖ, ನಿವರ್ತಿ ಸತ್ಪಾಲ, ಸಂಗಪ್ಪಾ ತಾಂಬಳೆ, ಶರಣಪ್ಪಾ ಎಕಲಾರ, ನಾಗಶಟ್ಟಿ ಗಾದಿಗೆ, ಅಕ್ಕನಾಗಮ್ಮ, ಅನುರಾಧ, ವೈಜಿನಾಥ ಧನಗರ್, ವೈಜಿನಾಥ ಮಠಪತಿ, ಇಸುಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಮತದಾನ ನಮ್ಮ ಹಕ್ಕು, ಒಂದು ಮತದಾನ ದೇಶದ ಭವಿಷ್ಯ ಬದಲಿಸಬಹುದು. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.
ಸುದೇಶಕುಮಾರ
ತಾಪಂ. ಸಹಾಯಕ ನಿರ್ದೇಶಕರು.