ವ್ಯಕ್ತಿಯ ಸುಂದರ ಜೀವನ ನಿರ್ವಹಣೆಗೆ ಶಿಕ್ಷಣ ದಾರಿದೀಪ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೬: ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯದ ಸುಂದರ ಜೀವನ ನಿರ್ವಹಣೆಗೆ ಶಿಕ್ಷಣ ದಾರಿದೀಪವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಶುಕ್ರವಾರ ನವಭಾರತ ಸಾಕ್ಷರರ ಪರೀಕ್ಷೆ ನಡೆಸುವ ಸಂಬಂಧ ಎಲ್ಲಾ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ನೋಡಲ್ ಅಧಿಕಾರಿಗಳಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎಲ್ಲಾ ತಾಲೂಕಿನಲ್ಲಿ ಸಾಕ್ಷರತಾ ಪರೀಕ್ಷೆಯು ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್-24 ರಂದು ನಡಯಲಿದ್ದು ತಾಲೂಕು ಹಂತದಲ್ಲಿ ಮುಖ್ಯ ಅಧೀಕ್ಷಕರ ಸಭೆ ನಡೆಸಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ 13232 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದು ಶೇ 100 ರಷ್ಟು ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಲು ತಾಲೂಕು ಹಂತದ ಅಧಿಕಾರಿಗಳು ಕ್ರಮವಹಿಸಬೇಕು. ಚಿತ್ರದುರ್ಗ-2040, ಚಳ್ಳಕೆರೆ-2505, ಹಿರಿಯೂರು-2780, ಹೊಳಲ್ಕೆರೆ-1795, ಹೊಸದುರ್ಗ-2190, ಮೊಳಕಾಲ್ಮೂರು-1922 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವರು ಎಂದು ಮಾಹಿತಿ ನೀಡಿದರು.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಮಾರ್ಚ್ 27 ರೊಳಗೆ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 30 ರಂದು ಫಲಿತಾಂಶ ಪಟ್ಟಿ ನೀಡಬೇಕು ಎಂದು ತಿಳಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ಎಚ್.ಗಿರಿಜಾ, ಉಪನ್ಯಾಸಕ ಎಸ್.ಬಸವರಾಜು, ಬಿ.ಆರ್.ಸಿ ಸಂಪತ್ ಕುಮಾರ್, ಸುರೇಂದ್ರನಾಥ್, ಬಿ. ತಿಪ್ಪೇಸ್ವಾಮಿ, ಶ್ರೀನಿವಾಸ್, ಕೆ.ತಿಪ್ಪೇಸ್ವಾಮಿ, ಅಕ್ಷರ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕ ಹನುಮಂತರಾಯ ಕಣ್ಣಿ, ಬಿ.ಆರ್.ಪಿ ಗೀತಾ, ಮೈಲಾರಪ್ಪ, ಮಂಜುನಾಥ್ ಮತ್ತಿತರರಿದ್ದರು.