ಖರ್ಗೆ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಾಂಗ್ರೆಸ್ ತೊರೆದು ಚವ್ಹಾಣ್ ಬಿಜೆಪಿಗೆ
ಕಲಬುರಗಿ:ಮಾ.15: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕೀಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದು, ಕೊನೆಯ ಹಂತದಲ್ಲಿಯೂ ಸಹ ತಮ್ಮ ಕುಟುಂಬ ರಾಜಕಾರಣ ಮುಂದುವರೆಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ದೊರೆಯಲಾರದು. ಹಾಗಾಗಿ ಆ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಿದ್ದಾಗಿ ಮಾಜಿ ಸಚಿವ ಹಾಗೂ ಅಖಿಲ ಭಾರತ ಬಂಜಾರಾ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಬಾಬುರಾವ್ ಚವ್ಹಾಣ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ, ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಷ್ಟ್ರೀಯ ಮುಖಂಡ ಸಿ.ಟಿ. ರವಿ ಅವರ ಸಮ್ಮುಖದಲ್ಲಿ ಬಿಜೆಪಿಯನ್ನು ಅಧಿಕೃತವಾಗಿ ಸೇರಿದ್ದಾಗಿ ತಿಳಿಸಿದರು.
ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇಂತಹ ಸಂದರ್ಭದಲ್ಲಿಯೂ ಸಹ ತಮ್ಮ ಕುಟುಂಬ ರಾಜಕಾರಣವನ್ನು ಮುಂದುವರೆಸಿಕೊಂಡಿದ್ದಾರೆ. ತಮ್ಮ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಸಚಿವ ಸ್ಥಾನ ಕೊಟ್ಟಿದ್ದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಸ್ಥಾನಮಾನಗಳಿಗೆ ಕುತ್ತು ಬರುವುದನ್ನು ತಡೆಯಲು ಸೋಲುವ ಬಂಜಾರಾ ಸಮಾಜದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಗೆಲ್ಲದಂತೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿನ ಬಂಜಾರಾ ಸಮಾಜದ ನಾಯಕರ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಿಂದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಹಾಗೂ ಚಿಂಚೋಳಿ ಮೀಸಲು ಕ್ಷೇತ್ರದಿಂದ ಸುಭಾಷ್ ರಾಠೋಡ್ ಅವರು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಸಹ ಅವರಿಗೆ ಟಿಕೆಟ್ ಕೊಟ್ಟರು. ನಿರೀಕ್ಷೆಯಂತೆಯೇ ಅವರಿಬ್ಬರೂ ಪರಾಭವಗೊಂಡಿದ್ದು, ಪರಿಣಾಮ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಮಾತ್ರ ಗೆಲುವು ಸಾಧಿಸಲು ಅನುಕೂಲ ಮಾಡಿಕೊಂಡರು. ಬಂಜಾರಾ ಸಮಾಜದವರಿಗೆ ಟಿಕೆಟ್ ಕೊಡಲಾಗಿದೆ ಎಂದುಕೊಂಡು ಚಿತ್ತಾಪುರ ಕ್ಷೇತ್ರದಲ್ಲಿ ಬಂಜಾರಾ ಸಮಾಜದವರು ಪ್ರಿಯಾಂಕ್ ಖರ್ಗೆಯವರಿಗೆ ಮತ ಹಾಕಿದರು. ಇದರಿಂದಾಗಿ ಬಂಜಾರಾ ಸಮಾಜವು ಕಾಂಗ್ರೆಸ್ ಪಕ್ಷದಲ್ಲಿ ಬಲಿಪಶುಗಳಾಗುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಈಗ ಎಲ್ಲವೂ ಮುಗಿದರೂ ಸಹ ಲೋಕಸಭಾ ಚುನಾವಣೆಯಲ್ಲಿಯೂ ಸಹ ಬಂಜಾರಾ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಲು ನಿರ್ಲಕ್ಷಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಅಳಿಯ ರಾಧಾಕೃಷ್ಣ ಅವರಿಗೆ ಪಕ್ಷದ ಟಿಕೆಟ್ ಕೊಡುತ್ತಿದ್ದಾರೆ. ಇಂತಹ ಕುಟುಂಬ ರಾಜಕಾರಣವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದರಿಂದ ಯಾವುದೇ ಬೇರೆ ಸಮಾಜಕ್ಕೆ ಹಾಗೂ ಸ್ವಸಮಾಜಕ್ಕೂ ಅನ್ಯಾಯವಾಗಲಿದೆ. ಕೇವಲ ತಮ್ಮ ಕುಟುಂಬದವರೇ ಸಚಿವರಾಗಬೇಕು, ಶಾಸಕರಾಗಬೇಕು, ಲೋಕಸಭಾ ಸದಸ್ಯರಾಗಬೇಕು, ತಾವು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಬೇಕು ಎಂದರೆ ಉಳಿದವರಿಗೆ ಹಾಗೂ ಸ್ವಸಮಾಜದಲ್ಲಿರುವ ಇನ್ನಿತರ ಅರ್ಹ ನಾಯಕರ ಗತಿ ಏನು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಬಂಜಾರಾ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲಿಲ್ಲ. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿಯೂ ಸಹ ಸಮಾಜವನ್ನು ಕಡೆಗಣಿಸಲಾಗಿದೆ. ನೆರೆಯ ತೆಲಂಗಾಣ್ ರಾಜ್ಯದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಯೂ ಸಹ ಬಂಜಾರಾ ಸಮಾಜಕ್ಕೆ ಕಡೆಗಣಿಸಲಾಗಿದೆ. ಇಂತಹ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಲಬುರ್ಗಿ ಮೀಸಲು ಕ್ಷೇತ್ರದಲ್ಲಿ ತಮ್ಮ ಅಳಿಯನಿಗೆ ಖರ್ಗೆಯವರು ಟಿಕೆಟ್ ಕೊಡುವ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಮಾಡಲಾಗದು. ಏನಿದ್ದರೂ ಸಹ ಅರ್ಹತೆಯ ಮೇಲೆ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಂಜಾರಾ ಸಮಾಜಕ್ಕೆ ಟಿಕೆಟ್ ಕೊಡುವ ಮೂಲಕ ನಮ್ಮ ಸಮಾಜವನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ಯಾವುದೇ ವೈಯಕ್ತಿಕ ಪರಿವಾರವಿಲ್ಲ. ಎಲ್ಲ ಸಮುದಾಯದವರೂ ಸಹ ಪ್ರಧಾನಿಯವರಿಗೆ ಪರಿವಾರವಿದೆ. ಹೀಗಾಗಿ ಅವರ ನಾಯಕತ್ವದಲ್ಲಿಯೇ ಎಲ್ಲ ಸಮಾಜಗಳಿಗೂ, ಅದರಲ್ಲಿಯೂ ಬಂಜಾರಾ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಆ ಎಲ್ಲ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸೇರಿದ್ದೇನೆ. ಬಿಜೆಪಿಯ ಗೆಲುವಿಗಾಗಿ ಯಾವುದೇ ಶರತ್ತಿಲ್ಲದೇ ಕೆಲಸ ಮಾಡುವೆ ಎಂದು ಅವರು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಬಂಜಾರಾ ಸಮಾಜದ ಮೇಲೆ ದೌರ್ಜನ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಆ ಹಿನ್ನೆಲೆಯಲ್ಲಿ ಅವರಿಗೆ ಸಾಕಷ್ಟು ಸಲ ಮಾಧ್ಯಮಗಳ ಮೂಲಕ ಸಲಹೆ ನೀಡಿದರೂ ಸಹ ಅವುಗಳನ್ನು ಪರಿಗಣಿಸಲಿಲ್ಲ. ಒಟ್ಟಾರೆಯಾಗಿ ಕಾಂಗ್ರೆಸ್ಸಿನಲ್ಲಿರುವ ಬಂಜಾರಾ ಸಮುದಾಯದವರಿಗೆ ಯಾವುದೇ ರೀತಿಯಲ್ಲಿ ಬೆಂಬಲ, ಸಹಕಾರ ಕೊಡದೇ ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಬಂಜಾರಾ ಸಮಾಜಕ್ಕೆ ಕಾಂಗ್ರೆಸ್ಸಿನಿಂದ ಉಪಯೋಗ ಇಲ್ಲ. ಬಿಜೆಪಿಯಲ್ಲಿಯೇ ಸೂಕ್ತ ಸ್ಥಾನಮಾನಗಳು ಲಭಿಸುತ್ತಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಇಂದಿರಾ ಶಕ್ತಿ, ಬಸವರಾಜ್ ಸಪ್ಪನಗೋಳ್, ಶಂಕರ್ ಚವ್ಹಾಣ್, ರಾಜಶೇಖರ್ ಡೊಂಗರಗಾಂವ್ ಮುಂತಾದವರು ಉಪಸ್ಥಿತರಿದ್ದರು.