ಪಾಸು ಮಾಡು ದೇವರೇ ಹರಕೆ ನೋಟು ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಪತ್ತೆ
ಕಲಬುರಗಿ:ಮಾ.15:ಇತ್ತೀಚೆಗೆ ತನ್ನ ಅತ್ತೆ ಸಾಯಬೇಕು ಎಂದು ಸೊಸೆಯೊಬ್ಬಳು ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಹುಂಡಿಯೊಳಗೆ 50ರೂ.ಗಳ ಮುಖಬೆಲೆಯ ನೋಟಿನ ಮೇಲೆ ಬರೆದು ಹಾಕಿದ್ದು ಪತ್ತೆಯಾದ ಬೆನ್ನಲ್ಲಿಯೇ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಪಾಸು ಮಾಡು ದೇವರೇ ಎಂದು ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಕ್ಷೇತ್ರ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 20ರೂ.ಗಳ ಮುಖಬೆಲೆಯ ನೋಟಿನ ಮೇಲೆ ಹರಕೆ ಹೊತ್ತು ಹಾಕಿದ್ದು ಪತ್ತೆಯಾಗಿದೆ.
ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಷ್ಟ್ರಕೂಟರ ಕುಲದೇವತೆ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಯೊಬ್ಬರು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಇಪ್ಪತ್ತು ರೂ.ಗಳ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ್ದು ಶುಕ್ರವಾರ ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿರುವ ಹುಂಡಿಯ ಹಣ ಎಣಿಕೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಯ ಕೈಗೆ ದೊರಕಿದೆ.
ವಿವಿಧ ರೀತಿಯ ಭಕ್ತರು ತಮ್ಮ ಇಷ್ಟ ದೇವತೆಗೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಒಳ್ಳೆಯದಕ್ಕಾಗಿ ಒಂದೊಂದು ರೀತಿಯಲ್ಲಿ ಹರಕೆ ಹೊತ್ತು ದೇವರ ಮುಂದೆ ಮಂಡಿಸುತ್ತಾರೆ. ಕೆಲವರು ಕೈಮುಗಿದು ತೆಂಗಿನ ಕಾಯಿ ಒಡೆದು, ಕರ್ಪೂರ ಹಚ್ಚಿ, ನೈವೇದ್ಯ ಕೊಡುವುದು, ದಿಂಡರಕಿ ಉರುಳುವುದು, ಕೇಶ ಮುಂಡನ ಮಾಡಿಸುವುದು, ಉಪವಾಸ ಇರುವುದು ಮುಂತಾದವುಗಳಲ್ಲಿ ತೊಡಗುತ್ತಾರೆ. ಆದಾಗ್ಯೂ, ನೋಟಿನ ಮೇಲೆ ತಮ್ಮ ಹರಕೆ ಹೊತ್ತು ಹುಂಡಿಗೆ ಹಾಕುವುದು ಸಾಕಷ್ಟು ವಿರಳ. ಈಗ ನೋಟಿನ ಮೇಲೆ ಬರೆದು ಹರಕೆಯನ್ನು ಹುಂಡಿಯ ಮೂಲಕ ದೇವರಿಗೆ ಅರ್ಪಿಸುತ್ತಿರುವುದು ತುಂಬಾ ಚರ್ಚೆಗೆ ಗ್ರಾಸವಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೆಚ್ಚು ಜಾರಿಯಾಗಿದ್ದು, ಯಜಮಾನಿಗೆ 2000ರೂ.ಗಳು ಪ್ರತಿ ತಿಂಗಳು ಹಾಕುತ್ತಿರುವುದರಿಂದ ಅತ್ತೆ, ಸೊಸೆ ಜಗಳವು ಈಗ ದೇವರ ಹುಂಡಿಯೊಳಗೆ ಹೋಗುತ್ತಿದೆ. ಅದಕ್ಕಾಗಿಯೇ ಸೊಸೆಯೊಬ್ಬಳು ತನ್ನ ಅತ್ತೆ ಬೇಗ ಸಾಯಲಿ ಎಂದು ಹರಕೆ ಹೊತ್ತು, ದತ್ತನ ಹುಂಡಿಗೆ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.
ಪ್ರತಿಯೊಬ್ಬರೂ ಪರೀಕ್ಷೆಯ ಸಂದರ್ಭದಲ್ಲಿ ಕೈಮುಗಿದು ನನಗೆ ಪಾಸು ಮಾಡು ದೇವರೇ, ಉತ್ತಮ ಅಂಕಗಳು ದೊರೆಯಲಿ ಎಂದು ಬೇಡಿಕೊಳ್ಳುವುದು ಸಹಜವಾಗಿದೆ. ಆದಾಗ್ಯೂ, ನೋಟಿನ ಮೂಲಕ ಹರಕೆಯನ್ನು ಹುಂಡಿಯ ಮೂಲಕ ಒಪ್ಪಿಸಿದ್ದು ಮಾತ್ರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.