ಚಿತ್ತಾಪುರ: ಗುರುವಂದನಾ ಕಾರ್ಯಕ್ರಮ
ಚಿತ್ತಾಪುರ,ಸೆ.17-ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ರಿಕ್ರಿಯೇಷನ್ ಶಿಕ್ಷಣ ಸಂಸ್ಥೆ ಹಳೆಯ ವಿದ್ಯಾರ್ಥಿಗಳ ಬಳಗದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಕಾಶಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಉತ್ತಮ ಶಿಕ್ಷಣದ ಕೊಂಡಿ ಇದ್ದಾಗ ಮಾತ್ರ ದೇಶ ಸಮೃದ್ಧಿ ಹೊಂದಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಿದ್ದಾರೆ. ಪುರಾಣ ಕಾಲದಿಂದಲೂ ಗುರು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರುವುದನ್ನು ಓದಿದ್ದೇವೆ. ಜ್ಞಾನದ ಹಸಿವನ್ನು ತೀರಿಸಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣಿಯ. ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಿಂದ ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರಭುದ್ಧಗೊಳಿಸಿದ ಶಿಕ್ಷಕರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿ ದೇವಪ್ಪ ಮಾತನಾಡಿ, ಸಂಸ್ಥೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಒಂದಿಲ್ಲೊಂದು ಉನ್ನತ ಸ್ಥಾನದಲ್ಲಿ ನಿರತರಾಗಿದ್ದೇವೆ. ಯಾವ ಒಬ್ಬ ವಿದ್ಯಾರ್ಥಿಯೂ ಸುಮ್ಮನೆ ಕುಳಿತಿಲ್ಲ. ಇಲ್ಲಿನ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಉತ್ತಮ ಶಿಕ್ಷಣ ನೀಡಿದ್ದರಿಂದ ಉನ್ನತ ಸ್ಥಾನದಲ್ಲಿದ್ದೇವೆ. ಅದೇ ನಮಗೆ ಹೆಮ್ಮೆ ಎಂದು ಹೇಳಿದರು. ಸಂಸ್ಥೆ ಸಂಚಾಲಕ ವೀರೇಂದ್ರಕುಮಾರ ಕೊಲ್ಲೂರ, ಸದಸ್ಯ ಆದಮಲಿ ಸೇಟ್, ಶಿಕ್ಷಕರಾದ ಮಸ್ತಾನ ಪಟೇಲ್, ಖಮರುನ್ನಿಸಾ ಬೇಗಂ, ಮನುಜಾ ಉತ್ತರಕರ್, ಶಶಿರೇಖಾ, ಮನೋಹರಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.