ಆಂತರಿಕ ಗುಂಪು ವಿಮಾ ಯೋಜನೆ: ಸೇವಾ ಅವಧಿಯಲ್ಲಿ ನಿಧನರಾದ ಒಟ್ಟು14 ನೌಕರರ ನಾಮನಿರ್ದೇಶಿತರಿಗೆ ಒಟ್ಟು 1.40 ಕೋಟಿ ರೂ. ಗಳ ಪರಿಹಾರ ಮೊತ್ತ ವಿತರಣೆ
ಕಲಬುರಗಿ:ಸೆ.17:ಆಂತರಿಕ ಗುಂಪು ವಿಮಾ ಯೋಜನೆಯಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನರಾದ 14 ಜನ ನೌಕರರ ನಾಮನಿರ್ದೇಶಿತರಿಗೆ ತಲಾ 10 ಲಕ್ಷ ರೂ. ದಂತೆ ಒಟ್ಟು 1.40 ಕೋಟಿ ರೂ. ಗಳ ಪರಿಹಾರ ಮೊತ್ತ (ಧನಾದೇಶ)ವನ್ನು ರಾಜ್ಯದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರು ಹಾಗೂ ಕ.ಕ.ರ.ಸಾ.ನಿಗಮದ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರು ಬುಧವಾರ ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ವಿತರಿಸಿದರು.
ನಿಗಮದ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡಿರುವ ಬೀದರ ವಿಭಾಗ-05, ವಿಜಯಪೂರ ವಿಭಾಗ-04, ಕಲಬುರಗಿ ವಿಭಾಗ-02 ಹಾಗೂ ರಾಯಚೂರು ವಿಭಾಗ-03 ಸೇರಿದಂತೆ ಒಟ್ಟು 14 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ 10 ಲಕ್ಷ ರೂ. ಗಳಂತೆ ಒಟ್ಟು ರೂ.1.40 ಕೋಟಿಗಳ ಪರಿಹಾರ ಮೊತ್ತದ ಧನಾದೇಶಗಳನ್ನು ವಿತರಿಸಲಾಯಿತು.
ಈ ಧನಾದೇಶಗಳನ್ನು ವಿತರಿಸಿ ಮಾತನಾಡಿದ ಸಚಿವರು, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡ ಸಿಬ್ಬಂದಿಯವರ ನಾಮನಿರ್ದೇಶಿತರಿಗೆ 10 ಲಕ್ಷ ರೂ. ಪರಿಹಾರ ವಿತರಿಸುವ ಯೋಜನೆಯನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಉತ್ತಮ ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಚೆಕ್‍ಗಳನ್ನು ಸ್ವೀಕರಿಸಿದ ಮಾತಾನಾಡಿ ಫಲಾನುಭವಿಗಳು ಆಂತರಿಕ ಗುಂಪು ವಿಮಾ ಯೋಜನೆಯಡಿ 10 ಲಕ್ಷ ರೂ.ಗಳ ಪರಿಹಾರ ಮೊತ್ತ ವಿತರಿಸಿರುವುದಕ್ಕೆ ಆರ್ಥಿಕವಾಗಿ ನಮ್ಮ ಕುಟುಂಬಗಳಿಗೆ ಬಹಳ ಅನುಕೂಲವಾಗಿದೆ ಇದಕ್ಕೆ ಕಾರಣಕರ್ತರಾದ ಸಾರಿಗೆ ಸಚಿವರಿಗೆ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹಾಗೂ ಕ.ಕ.ರ.ಸಾ.ನಿಗಮದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.