ಛಿದ್ರಗೊಂಡ ಹಳಿ: ನೆಲಕ್ಕುರುಳಿದ ಗೂಡ್ಸ್ ರೈಲು
ಕಲಬುರಗಿ,ಮಾ.15-ರೈಲಿನ ಭಾರ ತಾಳದೆ ರೈಲು ಹಳಿ ಛಿದ್ರಗೊಂಡು ಗೂಡ್ಸ್ ರೈಲು ನೆಲಕ್ಕುರುಳಿದ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಿಕಂದರಾಬಾದ್‍ನಿಂದ ವಾಡಿ ಪಟ್ಟಣದ ಗೂಡ್ಸ್ ಯಾರ್ಡ್‍ಗೆ ಕಲ್ಲು ಹೊತ್ತುಕೊಂಡು ಬರುತ್ತಿದ್ದ ಗೂಡ್ಸ್ ರೈಲಿನ ಭಾರ ತಾಳದೇ ಹಳಿಗಳು ಸೀಳಿದ್ದರಿಂದ ಏಕಾಏಕಿ ಭಾರೀ ಸದ್ದಿನೊಂದಿಗೆ 5 ಬೋಗಿಗಳು ನೆಲಕ್ಕುರುಳಿವೆ.
ರೈಲು ನಿಲ್ದಾಣದ ಕ್ಯಾಂಟಿನ್ ಹತ್ತಿರವೇ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡ ಕ್ರೇನ್‍ಗಳ ಸಹಾಯದಿಂದ ಹಳಿಗಳ ಮೇಲಿನ ಬೋಗಿಗಳನ್ನು ತೆರವುಗೊಳಿಸಲಾಗುತ್ತಿದೆ.