ನಾಳೆ ಕಲಬುರಗಿಗೆ ಪ್ರಧಾನಮಂತ್ರಿ ಮೋದಿ
ಕಲಬುರಗಿ,ಮಾ.15-ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಮಾ.16) ನಗರಕ್ಕೆ ಆಗಮಿಸಲಿದ್ದಾರೆ.
ನಗರದ ಎನ್.ವಿ.ಮೈದಾನದಲ್ಲಿ ನಾಳೆ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇದಕ್ಕಾಗಿ ಎನ್.ವಿ.ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್, ಕಟೌಟ್‍ಗಳು ರಾರಾಜಿಸುತ್ತಲಿವೆ.
ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾದ ರಾಜುಗೌಡ ಅವರು, ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.
ಮಾ.16 ರಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಲಬುರಗಿಯಿಂದಲೇ ಪ್ರಧಾನಿ ಮೋದಿ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದಾರೆ. ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್‍ಪೆÇೀರ್ಟ್‍ಗೆ ಆಗಮಿಸಲಿರುವ ಮೋದಿ, ಪೆÇಲೀಸ್ ಮೈದಾನದಿಂದ 10 ರಿಂದ 12 ನಿಮಿಷ ರೋಡ್ ಶೋ ಮಾಡಲಿದ್ದಾರೆ. ಬಳಿಕ 40 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಹಾಗೂ ಬೀದರ್ ಕ್ಷೇತ್ರದ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಗಿ ಭದ್ರತೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದರು.
“ಸಂಜೆವಾಣಿ”ಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ವಾಹನ ಪಾರ್ಕಿಂಗ್ ವ್ಯವಸ್ಥೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ, ಜೊತೆಗೆ ಗಣ್ಯಾತಿಗಣ್ಯ ವ್ಯಕ್ತಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳನ್ನು ಸಂಚರಿಸುವ ಮಾರ್ಗ ಹಾಗೂ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆಯನ್ನು ಈ ಕೆಳಕಂಡ ಸ್ಥಳಗಳಲ್ಲಿ ನಿಗದಿ ಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳಂದ ತಾಲ್ಲೂಕದಿಂದ ಬರುವ ವಾಹನಗಳನ್ನು ಆಳಂದ ನಾಕಾ, ಲಾಲಗೇರಿ ಕ್ರಾಸ್ ಮುಖಾಂತರ ಎಸ್.ಬಿ.ಟೆಂಪಲ್‍ನ ಜಾತ್ರಾ ಮೈದಾನದ ಬಯಲು ಪ್ರದೇಶದಲ್ಲಿ, ಹುಮನಾಬಾದ ತಾಲ್ಲೂಕದಿಂದ ಬರುವ ವಾಹನಗಳನ್ನು ಗಂಜ್, ಸೂಪರ್ ಮಾರ್ಕೆಟ್, ಜಗತ್ ವೃತ್ತದಿಂದ ಕಲ್ಯಾಣಿ ಪೆಟ್ರೋಲ್ ಪಂಪ್ ಮಾರ್ಗವಾಗಿ ಅಪ್ಪ ಪಬ್ಲಿಕ್ ಶಾಲಾ ಹಾಗೂ ಕೋಟೆ ಮೈದಾನದಲ್ಲಿ, ಸೇಡಂ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಿಂದ ಬರುವ ವಾಹನಗಳು ಅನ್ನಪೂರ್ಣ ಕ್ರಾಸ್ ಮೂಲಕ ಜಗತ್ ಮಾರ್ಗವಾಗಿ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ, ಚಿತ್ತಾಪೂರ ಹಾಗೂ ಶಹಾಬಾದ ತಾಲ್ಲೂಕುಗಳಿಂದ ಬರುವಂತಹ ವಾಹನಗಳು ಶಹಾಬಾದ ರಿಂಗ್ ರೋಡ್, ನಾಗೇನಹಳ್ಳಿ ಕ್ರಾಸ್, ಕೋರಂಟಿ ಹನುಮಾನ ಮಂದಿರ ಮಾರ್ಗವಾಗಿ ವಿಜಯ ವಿದ್ಯಾಲಯ ಕಾಲೇಜು ಆವರಣ, ಅಫಜಲಪುರ ಹಾಗೂ ಜೇವರ್ಗಿ ಮುಖಾಂತರ ಬರುವ ವಾಹನಗಳು ರಾಷ್ಟ್ರಪತಿ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಆನಂದ ಓಪಿ ಮಾರ್ಗವಾಗಿ ಎಸ್.ಬಿ.ಕಾಲೇಜು ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಏಕಮುಖ ಸಂಚಾರ ವ್ಯವಸ್ಥೆ
ಸುಗಮ ಸಂಚಾರ ವ್ಯವಸ್ಥೆಯ ಕಾರಣದಿಂದಾಗಿ ರಾಷ್ಟ್ರಪತಿ ವೃತ್ತ ಮಾರ್ಗವಾಗಿ ಬಸ್ ಡಿಪೋ ನಂ.3ರ ಮಾರ್ಗವಾಗಿ ಎಸ್.ಬಿ.ಕಾಲೇಜುವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಈ ಮಾರ್ಗವಾಗಿ ಸಂಚರಿಸದಿರಲು ಸೂಚಿಸಲಾಗಿದೆ.