ಕೋಲಿ ಕಬ್ಬಲಿಗ ಎಸ್ಟಿ ಸೇರ್ಪಡೆ: ಪ್ರಧಾನಿ ಕ್ಷಮೆ ಯಾಚನೆಗೆ ಒತ್ತಾಯ
ಕಲಬುರಗಿ, ಮಾ.15; ರಾಜ್ಯದ ಕೋಲಿ ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸದೆ ಹೋದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಎಚ್ಚರಿಕೆ ನೀಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ವೇಳೆ ಕೋಲಿ ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಭರವಸೆ ನೀಡಿದ್ದರು. ಈ ಮಾತು ನಂಬಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಸಮುದಾಯ ಪೂರ್ಣ ಬೆಂಬಲ ನೀಡಿ ಸಹಕರಿಸಿತ್ತು. ಆದಾಗ್ಯೂ, ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿದ ಶಿಫಾರಸ್ಸು ಕೇಂದ್ರ ಸರಕಾರ 2014ರಲ್ಲಿ ತಿರಸ್ಕರಿಸಿತ್ತು. ಇದೀಗ ಚುನಾವಣಾ ಹೊಸ್ತಿಲಲ್ಲಿ ಸಹ ಕೇಂದ್ರ ಸರಕಾರ ಪುನಃ ಶಿಫಾರಸು ತಿರಸ್ಕರಿಸಿ ಸಮಾಜಕ್ಕೆ ದ್ರೋಹ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ, ಇದೇ ಮಾರ್ಚ್ 16ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ನಗರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಅವರು ತಮ್ಮ ಸುಳ್ಳು ಆಶ್ವಾಸನೆಗಾಗಿ ಕೋಲಿ ಕಬ್ಬಲಿಗ ಸಮುದಾಯದ ಎದುರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ಒಂದುವೇಳೆ ಪ್ರಧಾನಿ ಮೋದಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸದೆ ಹೋದರೆ ಈ ಬಾರಿ ರಾಜ್ಯಾದ್ಯಂತ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪುನರುಚ್ಚರಿಸಿದರು.
ಭೀಮಶಾ ಖನ್ನಾ, ಮಲ್ಲಿಕಾರ್ಜುನ ಜಮಾದಾರ್, ಪಿಂಟು ಜಮಾದಾರ್, ರಾಮಲಿಂಗ ನಾಟಿಕಾರ್, ವಿಜಯಕುಮಾರ್ ಜಮಾದಾರ್, ಅಂಬಾರಾಯ ಜವಳಗಾ, ದೇವೀಂದ್ರ ಜಮಾದಾರ್, ಮಲ್ಲಿಕಾರ್ಜುನ ಗುಡುಬಾ, ಸತೀಶ್ ಜಮಾದಾರ್, ಶಿವರಾಜ ಹಿಂಡಗೇರಿ, ನಾಗೇಂದ್ರಪ್ಪ ನಿಂಗಮಪಳ್ಳಿ ಸೇರಿದಂತೆ ಇತರರಿದ್ದರು.