ಅಮರೇಶ್ವರ ದರ್ಶನ ಪಡೆದ ಸಚಿವ ಖೂಬಾತವರು ಕ್ಷೇತ್ರದಲ್ಲಿ ಅದ್ದೂರಿ ಸ್ವಾಗತ
ಔರಾದ :ಮಾ.15: ಲೋಕ ಸಭಾ ಚುನಾವಣೆ ರಂಗೇರುತ್ತಿದ್ದಂತೆ ಇಲ್ಲಿನ ಜನ ಪ್ರತಿನಿಧಿಗಳು ಆಕ್ಟೀವ್ ಆಗಿದ್ದಾರೆ. ಏಳು ಬೀಳುಗಳ ನಡುವೆ ಮೂರನೇ ಬಾರಿಗೆ ಭಾಜಪಾ ಟಿಕೆಟ್ ಗಿಟ್ಟಿಸಿಕೊಂಡಿರುವ ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ, ಹಾಲಿ ಸಂಸದ ಭಗವಂತ ಖೂಬಾ ಅವರು ತನ್ನ ತವರು ಕ್ಷೇತ್ರದ ಉದ್ಭವಲಿಂಗ ಅಮರೇಶ್ವರರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಟಿಕೆಟ್ ಪಡೆದು ತನ್ನ ತವರು ಕ್ಷೇತ್ರ ಔರಾದ್ ಪಟ್ಟಣಕ್ಕೆ ಆಗಮಿಸುತ್ತಿರುವ ಸುದ್ದಿ ತಿಳಿದ ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳು ಖೂಬಾ ಅವರಿಗೆ ಭವ್ಯ ಸ್ವಾಗತ ಕೋರಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಅಮರೇಶ್ವರ ದೇವಸ್ಥಾನದವರೆಗೆ ಭಾಜಾ ಭಜಂತ್ರಿಯೊಂದಿಗೆ ಖೂಬಾ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಖೂಬಾ ಅವರಿಗೆ ಅಭಿಮಾನಿಗಳು ಜೈಕಾರ ಹಾಕಿದರು.
ನಂತರ ಪಟ್ಟಣದ ಹೊರ ವಲಯದಲ್ಲಿರುವ ಅವರ ತೋಟಕ್ಕೆ ಭೇಟಿ ನೀಡಿದ ಅವರು ಕುಟುಂಬ ಸದಸ್ಯರೊಂದಿಗೆ ಅವರ ತಾಯಿ ಲಿಂಗೈಕ್ಯ ಮಹಾದೇವಿ ಖೂಬಾ ಸಮಾಧಿಗೆ ಪೂಜೆ ಸಲ್ಲಿಸಿದರು. ಭಗವಂತ ಖೂಬಾ ಅವರ ಸಹೋದರರು ಮತ್ತು ಬೆಂಬಲಿಗರು ಜೊತೆಯಲ್ಲಿದ್ದರು.
ಈ ಸಂದರ್ಭದಲ್ಲಿ ಭಾಜಪಾ ಹಿರಿಯ ಧುರೀಣ ಶರಣಪ್ಪ ಪಂಚಾಕ್ಷರಿ, ಬಂಡೆಪ್ಪ ಕಂಟೆ, ದೀಪಕ ಪಾಟೀಲ ಚಾಂದೋರಿ, ಪ್ರಕಾಶ ಟೊಣ್ಣೆ, ರವೀಂದ್ರ ಮೀಸೆ, ಅಮರ ಎಡವೆ, ಪ್ರಕಾಶ ಘೂಳೆ, ಗಣಪತರಾವ ಉಚ್ಚೆ, ನ್ಯಾಯವಾದಿ ಚಂದ್ರಪ್ಪ ಪಾಟೀಲ್, ಪ್ರಕಾಶ ಟೊಣ್ಣೆ, ಚಂದ್ರಕಾಂತ ದೇಶಮುಖ, ತಾಪಂ ಮಾಜಿ ಸದಸ್ಯ ಶ್ರಿರಂಗ ಪರಿಹಾರ, ರಾಜಕುಮಾರ ಶೆಟಕಾರ್ ತೋರಣಾ, ಬಾಲಾಜಿ ತೆಲಂಗೆ, ರಾಜಕುಮಾರ ಮುದ್ದಾ, ರಾಜಕುಮಾರ ಚಿದ್ರೆ, ಸಚಿನ ಎಡವೆ, ಮಾದಪ್ಪ ಖೂಬಾ, ಶ್ರೀನಿವಾಸ ಖೂಬಾ, ಗುಂಡಯ್ಯ ಸ್ವಾಮಿ, ಪ್ರಭುರಾವ ಕಸ್ತೂರೆ, ಸಿದ್ದು ಖೂಬಾ, ಪಪಂ ಸದಸ್ಯರಾದ ಅಬ್ಜಲ್ ಪಠಾಣ, ಜಗನ್ನಾಥ ಮುದಾಳೆ, ನೀಲಮ್ಮ ಖಾನಾಪೂರೆ, ಕಲ್ಲಪ್ಪ ಮುದ್ದಾ, ನಾರಾಯಣ ಪಾಟೀಲ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
ಅಮರೇಶ್ವರರ ಪರಮಭಕ್ತ ಖೂಬಾ
ಅಮರೇಶ್ವರ ದೇವರ ಪರಮ ಭಕ್ತ ಎಂದೇ ಖ್ಯಾತಿ ಪಡೆದ ಭಗವಂತ ಖೂಬಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು. ಔರಾದನ ಮಹಾದೇವಿ ಗುರುಬಸಪ್ಪ ಖೂಬಾ ದಂಪತಿಯ ಕಿರಿಯ ಮಗನಾದ ಭಗವಂತ ಖೂಬಾ ಅವರು ಮೊದಲ ಬಾರಿ ಸಂಸದರಾದ ಬಳಿಕ ಅಮರೇಶ್ವರ ಉದ್ಭವಲಿಂಗಕ್ಕೆ ಬೆಳ್ಳಿಯ ಕವಚ ಮಾಡಿಸಿ, ಭಕ್ತಿ ಮೆರೆದಿದ್ದರು ಎಂದು ಹಿರಿಯರು ಖೂಬಾ ಭಕ್ತಿ ಬಗ್ಗೆ ಕೊಂಡಾಡಿರುವುದು ಕಂಡು ಬಂತು. ಈ ವೇಳೆ ಮಾತನಾಡಿದ ಖೂಬಾ ಅಮರೇಶ್ವರ ದೇವರ ಹಾಗೂ ಹೆತ್ತ ತಾಯಿಯ ಆರ್ಶೀವಾದದಿಂದ ಅನೇಕ ಜನಪರ ಕೆಲಸ ಮಾಡಲು ಸಾಧ್ಯವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡಲು ಪ್ರಧಾನಿ ನರೇಂದ್ರ ಮೋದಿ ನನಗೆ ಶಕ್ತಿಯಾಗಿದ್ದಾರೆ ಎಂದರು.
ಅಮರೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿದ ಖೂಬಾ
ಉದ್ಭವಲಿಂಗ ಎಂದೇ ಪ್ರಖ್ಯಾತಿ ಪಡೆದಿರುವ ಪಟ್ಟಣದ ಐತಿಹಾಸಿಕ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸಚಿವ ಭಗವಂತ ಖೂಬಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಹಿರಿಯ ಮುಖಂಡರು ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು ಈಗಾಗಲೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಅನೇಕ ಅಭಿವೃದ್ಧಿ ಮಾಡಬೇಕಿದೆ. ಆದ್ದರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದರು.
ಖೂಬಾ ಸನ್ಮಾನಕ್ಕೆ ನೂಕುನುಗ್ಗಲು
ಸಚಿವ ಭಗವಂತ ಖೂಬಾ ಅವರಿಗೆ ಅಮರೇಶ್ವರ ದೇವಸ್ಥಾನದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ತಾಲೂಕು ಆಡಳಿತದಿಂದ ಸತ್ಕರಿಸಿದರು. ಟಿಕೆಟ್ ಪೈನಲ್ ಆದ ಬಳಿಕ ಮೊದಲ ಬಾರಿಗೆ ಆಗಮಿಸಿದ ಖೂಬಾ ಅವರಿಗೆ ಅಭಿಮಾನಿಗಳು ಸತ್ಕರಿಸಲು ನಾ ಮುಂದು ತಾ ಮುಂದು ಎಂದು ನೂಕುನುಗ್ಗಲು ನಡೆಯಿತು. ಸಚಿವ ಭಗವಂತ ಖೂಬಾ ಅವರಿಗೆ ಸತ್ಕರಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.