ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಕಂದಕೂರ
ಸೈದಾಪುರ:ಮಾ.15:ನಮ್ಮ ತಂದೆಯವರ ಶಾಸಕರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಮತ್ತೊಮ್ಮೆ ನನ್ನನ್ನು ಈ ಕ್ಷೇತ್ರದ ಜನ ಆಶೀರ್ವದಿಸಿದ್ದಾರೆ. ಅವರ ಋಣ ತೀರಿಸಲು ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಪಟ್ಟಣದಲ್ಲಿ 2020-21 ನೇ ಸಾಲಿನ 60 ಲಕ್ಷದ ಅನುದಾನದಲ್ಲಿ ಮಾದರಿ ನಾಡ ಕಛೇರಿ ಕಟ್ಟಡದ ಉದ್ಘಾಟನೆ ಹಾಗೂ 2023-24ನೇ ಸಾಲಿನ ಕೆಕೆಆರ್‍ಡಿಬಿಯ ಅಂದಾಜು 50 ಲಕ್ಷ ಅನುದಾನದಲ್ಲಿ ಮುಚ್ಚು ಚರಂಡಿ ಹಾಗೂ ಸರಕಾರಿ ಹಿ.ಪ್ರಾ.ಶಾಲೆಯ ತಡೆಗೋಡೆ ನಿರ್ಮಾಣದ ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ನಾನು ಮುಂದಿನ ಐದು ವರ್ಷದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ವಾಗ್ದಾನ ಮಾಡಿದರು. ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಉತ್ತಮ ಗುಣಮಟ್ಟದಿಂದ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಡೇಚೂರು-ಬಾಡಿಯಾಲ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅತಂಹ ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿಕ್ಷಣ ರಂಗದಲ್ಲಿ ನಮ್ಮ ಕ್ಷೇತ್ರಕ್ಕೆ ಕೀರ್ತಿ ತನ್ನಿ: ಪ್ರತಿ ಬಾರಿ ಹತ್ತನೆ ಮತ್ತು ಪಿಯುಸಿಯ ರಾಜ್ಯ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯ ಹೆಸರು ಕೊನೆಯಲ್ಲಿ ಕಾಣುತ್ತಿರುವುದು ವೈಯಕ್ತಿಕವಾಗಿ ನನಗೆ ಬೇಸರವಿದೆ. ಅತ್ಯುತ್ತಮವಾಗಿ ಅಭ್ಯಾಸ ಮಾಡಿ ಟಾಪ್ 10ರಲ್ಲಿ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳ ಹೆಸರು ಬರುವಂತಾಗಬೇಕು. ಆ ಮೂಲಕ ನಮ್ಮ ಜಿಲ್ಲೆ ಮತ್ತು ಕ್ಷೇತ್ರಕ್ಕೆ ಕೀರ್ತಿ ತನ್ನಿ ಎಂದು ಶಾಸಕ ಕಂದಕೂರ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.