ರೈತರ ಶಕ್ತಿ ಎಂದರೆ ಅದು ವಿದ್ಯುತ್ ಶಕ್ತಿ: ಶಾಸಕ ಪಾಟೀಲ್
ಅಫಜಲಪುರ:ಮಾ.15: ರೈತರ ಶಕ್ತಿ ಎಂದರೆ ಅದು ವಿದ್ಯುತ್ ಶಕ್ತಿ. ಅಂತಹ ರೈತರಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡುವ ಮೂಲಕ ಸಾರ್ವಜನಿಕರ ಜನಸ್ನೇಹಿಯಾಗಿ ಕೆಲಸ ಮಾಡುವ ಜೆಸ್ಕಾಂ ಸಿಬ್ಬಂದಿಗಳ ಸೇವಾ ಕಾರ್ಯವನ್ನು ಅಭಿನಂದಿಸಬೇಕು ಎಂದು ಶಾಸಕ ಎಂ.ವೈ ಪಾಟೀಲ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಅಫಜಲಪುರ ಉಪ-ವಿಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಜೆಸ್ಕಾಂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ತಾಲೂಕಿನ ಯಾವುದೇ ಭಾಗದಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗದಂತೆ ಕೈಗೊಳ್ಳಲು ಅನುಸರಿಸಬೇಕಾದ ಯಾವುದೇ ಕೆಲಸ ಕಾರ್ಯಗಳು ಇದ್ದರೆ ನಮ್ಮ ಗಮನಕ್ಕೆ ತನ್ನಿ ಅದನ್ನು ಬಗೆಹರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇಲ್ಲಿನ ಅಧಿಕಾರಿಗಳ ಕ್ರಿಯಾಶೀಲ ಸೇವಾ ಮನೋಭಾವದಿಂದ ವಿದ್ಯುತ್ ಸರಬರಾಜಿನಲ್ಲಿ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ಮತ್ತು ಅವರು ಕೈಗೊಳ್ಳುವ ಮುಂಜಾಗೃತಾ ಕ್ರಮ ಮತ್ತು ಯಾವುದೇ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸುವ ಮೂಲಕ ರೈತರು, ಗ್ರಾಹಕರು ಮತ್ತು ಎಲ್ಲರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ಅಫಜಲಪುರ ಉಪ ವಿಭಾಗದ ಜೆಸ್ಕಾಂ ಎಇಇ ನಾಗರಾಜ ಕೆ. ಅವರು ಮಾತನಾಡಿ, ಕ್ಷೇತ್ರದ ಹಿರಿಯ ಶಾಸಕರು, ತಾಲೂಕು ಆಡಳಿತದ ಅಧಿಕಾರಿಗಳು, ರೈತರು, ಗ್ರಾಹಕರು ಹಾಗೂ ನಮ್ಮ ಸಿಬ್ಬಂದಿಗಳ ಸಹಕಾರದಿಂದ ನಮಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಸಮಸ್ಯೆ ಇರುವ ಭಾಗಗಳಲ್ಲಿ ಹೊಸ ಹೊಸ ಸಬ್ ಸ್ಟೇಶನ್ ಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಭಾಗದಲ್ಲೂ ವಿದ್ಯುತ್ ಪೂರೈಸುವ ಕೆಲಸ ಮಾಡುವುದಾಗಿ ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಜಮಾದಾರ, ಪುರಸಭೆ ಸದಸ್ಯ ನಿಂಗು ಚಲವಾದಿ, ಚಂದು ಕರಜಗಿ, ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮೀಕಾಂತ ಬಿರಾದಾರ ಶಾಖಾಧಿಕಾರಿಗಳಾದ ಸೈಯದ್ ಇಸಾ, ಮಹಾಂತೇಶ ಪಾಟೀಲ, ನೌಕರರ ಸಂಘದ ಅಧ್ಯಕ್ಷ ಮಹಾರಾಯ ಜಮಾದಾರ, ಶರಣು ಶೇರಿಕಾರ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.