ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸದಿದ್ದರೆ ಸಂಚಾರ ಬಂದ್ ಎಚ್ಚರಿಕೆ
(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೧೫-
ರಾಯಚೂರು ಜಿಲ್ಲೆಯಲ್ಲಿ ರಾಜಧನ ಆಧರಿತ ಮರಳು ಸಾಗಾಣಿಕೆಗೆ ತಕ್ಷಣವೇ ಅವಕಾಶ ನೀಡಬೇಕು ಇಲ್ಲವಾದಲ್ಲಿ ರಸ್ತೆಯುದ್ದಕ್ಕೂ ಟಿಪ್ಪರ್ ನಿಲುಗಡೆ ಮಾಡಿ ಸಂಚಾರ ಬಂದ್ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಯಚೂರು ಜಿಲ್ಲಾ ಟಿಪ್ಪರ್ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದರು.
ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ರಾಯಲ್ಟಿ ಆಧರಿತ ಮರಳು ಸಾಗಾಣಿಕೆಯನ್ನೇ ಉಪ ಜೀವನವನ್ನಾಗಿಸಿಕೊಂಡ ನೂರಾರು ಟಿಪ್ಪರ್ ಮಾಲೀಕರು- ಚಾಲಕರ ಬದುಕು ಬೀದಿಗೆ ಬರುವಂತಾಗಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಡಾ. ಶರಣ ಪ್ರಕಾಶ್ ಪಾಟೀಲ್ ರವರು ಜಿಲ್ಲೆಗೆ ನೆಪ ಮಾತ್ರಕ್ಕೆ ಮಾತ್ರ ಉಸ್ತುವಾರಿ ಸಚಿವರಾಗಿದ್ದು, ನಮ್ಮ ಸಮಸ್ಯೆಗಳನ್ನೇ ಆಲಿಸದ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಢಳಿತ ಸಕಾರಣವಿಲ್ಲದೇ ರಾಯಚೂರಿನಾದ್ಯಂತ ಕಳೆದ ೬ ತಿಂಗಳಿಂದ ಕಾನೂನಾತ್ಮಕ ಮರಳು ಸಾಗಾಣಿಕೆಗೆ ನಿರ್ಬಂಧವೇರಿರುವುದು ಖಂಡನೀಯ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗೀ ಕಟ್ಟಡ, ಸೇತುವೆ,ಬ್ರಿಡ್ಜ್, ಪ್ರಮುಖ ರಸ್ತೆಗಳು ಸಾರ್ವಜನಿಕ ಮನ ನಿರ್ಮಾಣ ಸೇರಿ ಇತರೆ ಮೂಲಭೂತ ಕಾಮಗಾರಿ ನಿರ್ಮಾಣಕ್ಕೆ ಮರಳು ಪೂರೈಕೆ ಅನಿವಾರ್ಯವಾಗಿದ್ದು, ಈ ಸಾಗಾಣಿಕೆಯನ್ನೇ ಅವಲಂಬಿಸಿ ಸಾಲಮಾಡಿ ಖರೀದಿಸಿರುವ ಕಂತು ಕಟ್ಟಲಾಗದ ಸ್ಥಿತಿಯ ನಿರ್ಮಾಣವಾಗಿದ್ದು, ಖಾಸಗೀ ಫೈನಾನ್ಸ್ ಕಿರುಕುಳಕ್ಕೆ ಟಿಪ್ಪರ್ ಮಾಲೀಕರು ಬೇಸತ್ತಿದ್ದು, ಬರಗಾಲ ಭೀಕರತೆಯಲ್ಲಿ ಚಾಲಕರ ಕುಟುಂಬ ಸದಸ್ಯರ ಬದುಕು ಬೀದಿಗೆ ಬರುವಂತಾಗಿದೆ ಎಂದು ದೂರಿದರು.
ನೆರೆಯ ಕಲ್ಬುರ್ಗಿ ಸೇರಿದಂತೆ ಸೇಡಂ, ಚಿತ್ತಾಪುರ ವ್ಯಾಪ್ತಿಯಲ್ಲಿ ಕಾನೂನು ಬಾಹೀರ ಮರಳುಗಾರಿಕೆ’ ರಾಜಾರೋಷವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಾತ್ರ ನಮ್ಮ ಹಕ್ಕಾಗಿರುವ ರಾಯಲ್ಟಿ ಆಧರಿತ ಮರಳು ಸಾಗಾಣಿಕೆ ನಿರ್ಬಂಧವೇರಿರುವುದು ಖಂಡನೀಯ.
ಕಳೆದ ೬ ತಿಂಗಳದ ಜಿಲ್ಲೆಯಾದ್ಯಂತ ಅಲ್ಲಿ ಕ್ರಷರ್, ಮಣ್ಣು ಮತ್ತು ಮರಂ ಸಾಗಾಣಿಕೆಗೆ ಪ್ರತ್ಯೇಕ್ಷ ಸಹಕರಿಸಿ ಆಗೊಮ್ಮೆ ಈಗೊಮ್ಮೆ ಪ್ರತ್ಯೇಕ್ಷವಾಗಿ ಕಣ್ಮರೆಯಾಗುವ ಉಸ್ತುವಾರಿ ಸಚಿವರು, ಕನಿಷ್ಠ ಪಕ್ಷ ಕಾನೂನಾತ್ಮಕ ಮರಳು ಸಾಗಾಣಿಕೆ ಸಭೆಗೆ ಯಾವುದೇ ಮುತುವರ್ಜಿ ವಹಿಸದೇ ಕಲ್ಬುರ್ಗಿ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಬೆಣ್ಣೆ ರಾಯಚೂರು ಜಿಲ್ಲೆಗೆ ಅನವಶ್ಯಕ ನಿರ್ಬಂಧವೇರುವ ಸುಣ್ಣ ಎನ್ನುವ ಧೋರಣೆ ಅನುಸರಿಸಲಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದಲೂ ಮರಳು ಸಾಗಾಣಿಕೆಯ ರಾಜಧನ ಮತ್ತು ಕೋಟ್ಯಾಂತರ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ರಾಯಚೂರು’ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಳೆದ ೬ ತಿಂಗಳಿಂದ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ನಿರ್ಬಂಧ ಹಿನ್ನೆಲೆ ಜಿಲ್ಲಾಡಳಿತಕ್ಕೆ ಸಂದಾಯವಾಗಬೇಕಿದ್ದ ಕೋಟ್ಯಾಂತರ ತೆರಿಗೆ ಹಣ ವೃಥಾ ನಷ್ಟವಾಗುವಂತಾಗಿದೆ.
ಪ್ರಗತಿ ಹಂತದ ಕಾಮಗಾರಿ ನಿರ್ಮಾಣಕ್ಕಾಗಿ ಜಿಲ್ಲಾಢಳಿತ ವತಿಯಿಂದ ಮರಳು ಸಾಗಾಣಿಕೆ ಮಾಡಲು ಹಟ್ಟಿ ಚಿನ್ನದ ಗಣಿ ವತಿಯಿಂದ ಜಿಲ್ಲೆಯಲ್ಲಿ ಪ್ರತ್ಯೇಕ ೩ ಕ್ವಾರಿಗಳ ನಿರ್ವಹಣೆಗೆ ಜಿಲ್ಲಾಡಳಿತ ಪರವಾನಿಗೆ ನೀಡಲಾಗಿದೆ.
ನಿರ್ದಿಷ್ಟ ಕಾರಣಗಳಿಲ್ಲದೇ ಮರಳು ಸಾಗಾಣಿಕೆಗೆ ಜನಪ್ರತಿನಿಧಿಗಳ ಮೌಖಿಕ ನೆಪ ಹೇಳಿ ಅವಕಾಶ ಕಲ್ಪಿಸದಿರುವುದು ಅತ್ಯಂತ ಖೇದಕರವಾಗಿದ್ದು, ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತು, ಟಿಪ್ಪರ್ ಮಾಲೀಕರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದಿಸಿ ಕಾನೂನಾತ್ಮಕವಾಗಿ ರಾಜಧನ ಆಧರಿತ ಮರಳು ಸಾಗಾಣಿಕೆಗೆ ತಕ್ಷಣವೇ ಅವಕಾಶ ಮಾಡಿಕೊಡದಿದ್ದಲ್ಲಿ ಉಸ್ತುವಾರಿ ಸಚಿವರು- ಜನಪ್ರತಿನಿಧಿಗಳು ಮತ್ತು ಜಿಲ್ಲಾಢಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಲತಾಯಿ ಧೋರಣೆ ಖಂಡಿಸಿ ರಸ್ತೆಯುದ್ದಕ್ಕೂ ಟಿಪ್ಪರ್ ನಿಲುಗಡೆ ಮಾಡಿ ಸಂಚಾರ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಸಿ. ಅಯ್ಯಣ್ಣ, ವಿನೋದ, ಪ್ರಸಾದ, ಪ್ರಸನ್ನ, ರಾಮನಗೌಡ, ನರಸಿಂಹಲು, ಶಶಿಕುಮಾರ, ಮಧು ಪಾಟೀಲ್, ಶಿವಾರೆಡ್ಡಿ, ಶೇಖರ್, ಶಿವನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.