ಇಂದು ಅಥವಾ ನಾಳೆ ಕಾಂಗ್ರೆಸ್‍ನ 2ನೇ ಪಟ್ಟಿ ಸಾಧ್ಯತೆ: ದಿನೇಶ
ಹುಬ್ಬಳ್ಳಿ, ಮಾ 15: ಇಂದು ಅಥವಾ ನಾಳೆ ಲೋಕಸಭಾ ಚುನಾವಣೆಯ ಕಾಂಗ್ರೆಸ್‍ನ ಎರಡನೇ ಪಟ್ಟಿ ಬರಬಹುದು. ಸಿಇಸಿ ಮೀಟಿಂಗ್ ಆಗಬೇಕಾದ್ದರಿಂದ ಸ್ವಲ್ಪ ತಡವಾಗುತ್ತಿದೆ. ಬಹುಶಃ ದಿ. 18 ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದು ಭ್ರಷ್ಟಾಚಾರದ ಪರಮಾವಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.
ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೇಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್‍ನಿಂದ ಅನೇಕ ವಿಚಾರಗಳು ಹೊರ ಬರುತ್ತವೆ ಎಂದರು.
ಯಡಿಯೂರಪ್ಪ ಪೆÇಕ್ಸೋ ಪ್ರಕರಣ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕಾನೂನು ತನಿಖೆ ಆಗಬೇಕು. ದೂರು ದಾಖಲಾದ ಕೂಡಲೇ ದೋಷಿ ನಿರ್ದೋಷಿ ಎಂದು ಹೇಳಲಾಗದು. ನಾವು ಯಾರನ್ನೂ ತೇಜೋವಧೆ ಮಾಡಬಾರದು. ಸರಿಯಾದ ತನಿಖೆಯಾಗಬೇಕು ಎಂದರು.
ರಾಜ್ಯದಲ್ಲಿ ಕ್ಯಾಂಡಿ ನಿಷೇಧ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತ, ಜನಜಾಗೃತಿಯಾಗಬೇಕು. ಆಕಸ್ಮಾತ್ ಕಬಾಬ್‍ನಲ್ಲೂ ಬಣ್ಣ ಬಳಸುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಗೋಬಿ ಮಂಚೂರಿಯಲ್ಲಿ ಬಣ್ಣ ಬಳಸದಂತೆ ಸೂಚನೆ ನೀಡಲಾಗಿದೆ. ಯಾರಾದರೂ ಆಕರ್ಷಕ ಬಣ್ಣ ಬಳಸಿದರೆ ಕ್ರಮ ಕೈಗೊಳ್ಳಲಾಗುವದು ಎಂದು ಅವರು ಹೇಳಿದರು.