ಶಿವರಾಮ್ ಒಬ್ಬ ಬಹುಮುಖ ಪ್ರತಿಭೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ ಮಾ,14:- ನಟ ಹಾಗೂ ದಕ್ಷ ಅಧಿಕಾರಿ, ಜನನಾಯಕನಾಗಿ ಹಾಗೂ ಚಲವಾದಿ ಮಹಾಸಭಾ ಸಂಸ್ಥಾಪಕರಾದಂತಹ ಕೆ.ಶಿವರಾಮ್ ರವರನ್ನು ಕಳೆದುಕೊಂಡ ನಮ್ಮ ಸಮುದಾಯ ಒಬ್ಬ ಬಹುಮುಖ ಪ್ರತಿಭೆಯ ನಾಯಕನನ್ನು ಕಳೆದುಕೊಂಡಾಂತಾಗಿದೆ ಎಂದು ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಕಾಂತರಾಜು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬುದ್ಧ ಬಸವ ಮತ್ತು ಅಂಬೇಡ್ಕರ್ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಿದ್ದ ಕೆ.ಶಿವರಾಮ್ ರವರ ಪುಣ್ಯತಿಥಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಶ್ರಮ, ಸ್ವಸಾಮಥ್ರ್ಯದಿಂದ ವಿದ್ಯಾವಂತರಾಗಿ ಕನ್ನಡದಲ್ಲಿ ಪ್ರಥಮವಾಗಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಕನ್ನಡಿಗರಾಗಿರುವುದು ರಾಜ್ಯದ ಹೆಮ್ಮೆಯಾಗಿತ್ತು ಎಂದರು.
ಮೈಸೂರಿನಲ್ಲಿ ಕಾಪೆÇೀರೇಷನ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಕೆ.ಶಿವರಾಮ್ ಬಡಾವಣೆ ನಿರ್ಮಾಣಮಾಡಿ ಬಡವರಿಗೆ, ಸೂರಿಲ್ಲದವರಿಗೆ, ನೊಂದವರಿಗೆ, ಶೋಷಿತರಿಗೆ ಮನೆ ನೀಡಿದರು. ಶೇ 18 ರ ಅನುಧಾನದಲ್ಲಿ ನಿರುದ್ಯೋಗಿ ಯುವಕರಿಗೆ, ದುಡಿಯುವವರಿಗೆ, ಕಾರ್ಮಿಕರಿಗೆ ಆಟೋ, ಕಾರುಗಳನ್ನು ಖರೀದಿಸಲು ಸಹಾಯಧನವನ್ನು ನೀಡುವ ಪರಿಪಾಠ ಆಕಿಕೊಟ್ಟಿದ್ದರು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದಾಗ ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳಿಗೆ ಘನತೆಯಿಂದ ಓದಬೇಕು, ಬದುಕಬೇಕು ಎಂಬ ಉದ್ದೇಶದಿಂದ ಹಾಸ್ಟೆಲ್‍ಗಳಲ್ಲಿ ಹಾಸಿಗೆ, ದಿಂಬು, ಮಂಚ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರು. ಅವರ ಅಧಿಕಾರದ ಅವದಿಯಲ್ಲಿ ಬಡವರು, ಹಿಂದುಳಿದವರು, ನೊಂದವರು, ಶೋಷಿತರ ಪರವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವಂತೆ ಮಾಡುವ ಮೂಲಕ ನೊಂದ ಸಮುದಾಯಗಳ ಬೆನ್ನಿಗೆ ನಿಂತು ಅಭಿವೃದ್ಧಿಗೆ ಸಹಕರಿಸಿದ ಉತ್ತಮ ಅಧಿಕಾರಿ ಎನಿಸಿದ್ದರು ಎಂದು ಪ್ರಶಂಸಿಸಿದರು.
ಸಮುದಾಯದ ಜನರನ್ನ ಬಡಿದೆಬ್ಬಿಸಿ ಸಂಘಟಿತರಾಗಿ ಹೋರಾಟಗಳನ್ನು ಮಾಡಿ ಅಭಿವೃದ್ಧಿ ಹೊಂದಲಿ ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಸುತ್ತಿ ಛಲವಾದಿ ಮಹಾಸಭಾ ಎಂಬ ಬೃಹತ್ ಸಂಘಟನೆಯನ್ನು ಸ್ಥಾಪಿಸಿದರು. ಅಂತವರನ್ನು ಕಳೆದುಕೊಂಡಿರುವುದು ನಮಗೆ ನೋವು ತಂದಿದೆ. ಅವರ ಆದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡು ಬದುಕೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಜಯ್ಯ, ನಿವೃತ್ತ ನೌಕರ ವೆಂಕಟೇಶ್, ಬುದ್ಧ ಬಸವ ಮತ್ತು ಅಂಬೇಡ್ಕರ್ ಸಮನ್ವಯ ಸಮಿತಿ ಅಧ್ಯಕ್ಷ ಎಂ.ಜೆ.ರಾಜಶೇಖರ, ಕಾರ್ಯದರ್ಶಿ ರಾಮಪ್ಪ, ಉಪಾಧ್ಯಕ್ಷ ಕೃಷ್ಣಯ್ಯ, ಖಜಾಂಚಿ ಮರಲಿಂಗಪ್ಪ, ನಿರ್ದೇಶಕರಾದ ಅಶೋಕ್ ಕುಮಾರ್, ಕೃಷ್ಣಯ್ಯ ನವೀನ, ಸೀತಾರಾಮ್, ಶಿವಲಿಂಗಯ್ಯ, ಸಿದ್ದರಾಜ, ದಾಸಯ್ಯ, ಚಂದ್ರಪ್ಪ, ಸೋಮಶೇಖರ್, ನಂಜಯ್ಯ, ಸುರೇಶ ಮತ್ತಿತರರು ಹಾಜರಿದ್ದರು.